ADVERTISEMENT

ವೈಝಾಗ್‌ ಅನಿಲ ದುರಂತ: ಸರ್ಕಾರದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

ಶೆಮಿಜ್‌ ಜಾಯ್‌
Published 7 ಮೇ 2020, 12:44 IST
Last Updated 7 ಮೇ 2020, 12:44 IST
ಸಂತ್ರಸ್ತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಯೋಧ
ಸಂತ್ರಸ್ತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಯೋಧ   

ವಿಶಾಖಪಟ್ಟಣ:ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್‌) ಗುರುವಾರ ಬೆಳಗಿನಜಾವ ಸಂಭವಿಸಿದಅನಿಲ ಸೋರಿಕೆ ಕುರಿತಂತೆ ಕೇಂದ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ವರದಿ ಕೇಳಿದೆ.

ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಸಂದರ್ಭದಲ್ಲೇ ಅನಿಲ ದುರಂತ ಸಂಭವಿಸಿದ್ದು ಜನರಲ್ಲಿ ಮತ್ತಷ್ಟು ಭಯವನ್ನು ಉಂಟುಮಾಡಿದೆ.

ಈ ಅನಿಲ ದುರಂತದಲ್ಲಿ ಯಾವುದೇ ರೀತಿಯ ಮಾನವಕೃತ ನ್ಯೂನತೆ ಹಾಗೂ ಅಜಾಗರೂಕತೆ ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ಎನ್‌ಎಚ್‌ಆರ್‌ಸಿ ತಿಳಿಸಿದೆ. ಆದಾಗ್ಯೂ ನಾಗರಿಕರು ಸಾವನ್ನಪ್ಪಿರುವುದು, ಹಲವರು ಅನಾರೋಗ್ಯಗೊಂಡಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎನ್‌ಎಚ್‌ಆರ್‌ಸಿ ಅಭಿಪ್ರಾಯಪಟ್ಟಿದೆ.

ADVERTISEMENT

ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಅನಿಲ ಸೋರಿಕೆಯ ಪರಿಣಾಮ ಉಂಟಾಗಿದೆ. ಜನರು ರಸ್ತೆಗಳ ಮೇಲೆ ಬಿದ್ದಿರುವುದು, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದು, ದೇಹದ ಮೇಲೆ ಗುಳ್ಳೆಗಳು ಮೂಡಿರುವ ಬಗ್ಗೆ ವರದಿಯಾಗಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.

ಸದ್ಯ ದೇಶದಲ್ಲಿ ಕೊರೊನಾ ವೈರಸ್‌ ಹಾವಳಿಯಿಂದ ಅಪಾಯ ಎದುರಾಗಿದ್ದು ಜನರನ್ನು ಬಲವಂತವಾಗಿ ಮನೆಯಲ್ಲಿ ಇರಿಸಲಾಗಿದೆ. ಈ ಸಮಯದಲ್ಲಿ ಅನಿಲ ಸೋರಿಕೆಯ ಘೋರ ದುರಂತ ಜನರನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ.

ಅನಿಲ ಸೋರಿಕೆ ನಂತರದ ರಕ್ಷಣಾ ಕಾರ್ಯಾಚರಣೆಗಳು, ವೈದ್ಯಕೀಯ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ನೀಡಿರುವ ಪರಿಹಾರ ಹಾಗೂ ಪುನರ್ವಸತಿ ಕೆಲಸಗಳ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಎನ್‌ಎಚ್‌ಆರ್‌ಸಿ ಕೋರಿದೆ.

ಅನಿಲ ಸೋರಿಕೆ ಸಂಬಂಧ ನಡೆಯುತ್ತಿರುವ ತನಿಖೆ ಹಾಗೂ ಘಟನೆ ಕುರಿತಂತೆ ನೋಂದಣಿಯಾಗಿರುವ ಎಫ್ಐಆರ್‌ಗಳ ಬಗ್ಗೆ ವರದಿ ನೀಡುವಂತೆ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಎನ್‌ಎಚ್‌ಆರ್‌ಸಿ ಸೂಚಿಸಿದೆ.

ಅನಿಲ ಸೋರಿಕೆ ಕಾರ್ಖಾನೆಯಲ್ಲಿ ಕೈಗಾರಿಕೆ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸಿ ವರದಿ ನೀಡುವಂತೆ ಎನ್‌ಎಚ್‌ಆರ್‌ಸಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

ಸಂಬಂಧಪಟ್ಟ ಅಧಿಕಾರಿಗಳಿಂದ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.