ADVERTISEMENT

ವಿಧ್ವಂಸಕ ಕೃತ್ಯಕ್ಕೆ ಸಜ್ಜು: ರಾಜ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರ ಬಂಧನ

ಪಿಟಿಐ
Published 11 ಜನವರಿ 2023, 10:24 IST
Last Updated 11 ಜನವರಿ 2023, 10:24 IST
   

ನವದೆಹಲಿ/ಬೆಂಗಳೂರು: ಶಿವಮೊಗ್ಗ‌ ಸ್ಫೋಟ ಮತ್ತು ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಹೇಳಿದೆ.

ಮಂಗಳೂರಿನ ಹೀರಾ ಕಾಲೇಜು ಬಳಿಯ ಮಝೀನ್ ಅಬ್ದುಲ್ ರಹಮಾನ್ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೇವನಾಯಕನಹಳ್ಳಿಯ ನದೀಮ್ ಅಹ್ಮದ್ ಕೆ ಅವರನ್ನು ಮಂಗಳವಾರ ಬಂಧಿಸಿರುವುದಾಗಿ ಎನ್‌ಐಎ ತಿಳಿಸಿದೆ.

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್‌ ಶಾರೀಖ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ನಾಲ್ವರು ಆರೋಪಿಗಳನ್ನು ಎನ್‌ಐಎ ಇತ್ತೀಚೆಗಷ್ಟೆ ಬಂಧಿಸಿತ್ತು.

ADVERTISEMENT

ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಮಜಿನ್ ಮತ್ತು ನದೀಮ್‌ನನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈ ಹಿಂದೆ ಬಂಧಿತ ಮಾಜ್‌ ಮುನೀರ್‌ ಮತ್ತು ಸೈಯ್ಯದ್‌ ಯಾಸೀನ್‌ ಅವರಿಂದ ಇವರು ನೇಮಕಗೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

‘ಇಸ್ಲಾಮಿಕ್ ಸ್ಟೇಟ್‌ನ ಚಟುವಟಿಕೆಗಳನ್ನು ಮುಂದುವರಿಸಲು ಆರೋಪಿಗಳನ್ನು ನೇಮಿಸಿಕೊಳ್ಳಲಾಗಿತ್ತು. ದೊಡ್ಡ ಪಿತೂರಿಯ ಭಾಗವಾಗಿ ವಿಧ್ವಂಸಕ ಅಥವಾ ಗಲಭೆ ಕೃತ್ಯಗಳಲ್ಲಿ ಆರೋ‍ಪಿಗಳು ಭಾಗಿಯಾಗಿದ್ದರು’ ಎಂದು ಎನ್‌ಐಎ ಹೇಳಿದೆ.

ಶಿವಮೊಗ್ಗದ ತುಂಗಾ ತೀರದಲ್ಲಿನ ಪ್ರಾಯೋಗಿಕ ಸ್ಫೋಟದಲ್ಲಿ ಈ ತಂಡ ಭಾಗಿಯಾಗಿತ್ತು. ಕಳೆದ ವರ್ಷ ಆಗಸ್ಟ್ 15 ರಂದು ಸಾವರ್ಕರ್ ಅವರ ಭಾವಚಿತ್ರ ಇಟ್ಟಿದ್ದ ವಿಚಾರದಲ್ಲಿ ನಡೆದ ಗಲಭೆಯ ಹಿಂದೆಯೂ ಇವರ ಕೈವಾಡವಿತ್ತು ಎಂದು ತಿಳಿಸಿದೆ.

ಈ ಘಟನೆಯಲ್ಲಿ ವ್ಯಕ್ತಿಯೊಬ್ಬನಿಗೆ ಇರಿಯಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಅವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದಾಗ, ಅವರಿಗೆ ಐಎಸ್‌ ನಂಟು ಇರುವುದು ಗೊತ್ತಾಗಿದೆ. ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿ ಬೃಹತ್‌ ವಿಧ್ವಂಸಕ ಕೃತ್ಯಕ್ಕೆ ಈ ತಂಡ ಸಜ್ಜಾಗಿತ್ತು’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.