ನವದೆಹಲಿ: ಛತ್ತೀಸಗಢದಲ್ಲಿನ ಸಿಆರ್‌ಪಿಎಫ್ ಶಿಬಿರಗಳ ಮೇಲೆ 2024ರಲ್ಲಿ ನಕ್ಸಲರು ನಡೆಸಿದ್ದ ದಾಳಿಗೆ ಸಂಬಂಧಿಸಿದಂತೆ, ನಾಪತ್ತೆಯಾಗಿರುವ 16 ಮಂದಿಯೂ ಸೇರಿದಂತೆ 17 ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ದೋಷಾರೋಪ ಹೊರಿಸಿದೆ.
ಸೋಡಿ ಬಾಮನ್ ಅಲಿಯಾಸ್ ದೇವಲ್ ಎಂಬಾತನನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನಾಪತ್ತೆ ಆಗಿರುವವರಲ್ಲಿ ನಕ್ಸಲರ ಕೇಂದ್ರ ಸಮಿತಿ ಮತ್ತು ವಿಶೇಷ ವಲಯ/ ರಾಜ್ಯ ಸಮಿತಿಯ ತಲಾ ಇಬ್ಬರು ಸದಸ್ಯರು ಹಾಗೂ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್ 1, ತೆಲಂಗಾಣ ರಾಜ್ಯ ಸಮಿತಿ, ಸಿಪಿಐನ ಪಾಮೆಡ್ ಪ್ರದೇಶ ಸಮಿತಿಯ ಹಿರಿಯ ಕಾರ್ಯಕರ್ತರಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಜಗದಲ್ಪುರದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
2024ರ ಜ. 16ರಂದು ಬಿಜಾಪುರ ಜಿಲ್ಲೆಯ ಚಿಂತವಾಗು ಮತ್ತು ಪಮೇಡ್‌ನಲ್ಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಹೊಸ ಶಿಬಿರ ಹಾಗೂ ಪಕ್ಕದಲ್ಲಿದ್ದ ಕೋಬ್ರಾ ಶಿಬಿರಗಳ ಮೇಲೆ ನಡೆದ ದಾಳಿಗೆ ಈ ಪ್ರಕರಣ ಸಂಬಂಧಿಸಿದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.