ADVERTISEMENT

ಝಾಕಿರ್ ನಾಯ್ಕ್ ಆಸ್ತಿ ಮುಟ್ಟುಗೋಲು

ಪಿಟಿಐ
Published 12 ಅಕ್ಟೋಬರ್ 2018, 20:15 IST
Last Updated 12 ಅಕ್ಟೋಬರ್ 2018, 20:15 IST
ಝಾಕಿರ್ ನಾಯ್ಕ್
ಝಾಕಿರ್ ನಾಯ್ಕ್   

ಮುಂಬೈ:ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್‌ಗೆ ಸೇರಿದ ಮೂರು ಸ್ಥಿರಾಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಮುಟ್ಟುಗೋಲು ಹಾಕಿಕೊಂಡಿದೆ.

ಕೋಮುವಾದಕ್ಕೆ ಕುಮ್ಮಕ್ಕು, ಪ್ರಚೋದನಕಾರಿ ಭಾಷಣ ಮತ್ತು ಭಯೋತ್ಪಾದನೆಗೆ ಉತ್ತೇಜನ ನೀಡಿದ ಆರೋಪದಲ್ಲಿ ಝಾಕಿರ್ ನಾಯ್ಕ್ ಮತ್ತು ಆತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್’ ವಿರುದ್ಧ 2016ರಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಎನ್‌ಐಎ ಪ್ರಕರಣ ದಾಖಲಿಸಿತ್ತು. ಆನಂತರ ಝಾಕಿರ್ ತಲೆಮರೆಸಿಕೊಂಡಿದ್ದಾನೆ.

ಎನ್‌ಐಎ ವಿಶೇಷ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ADVERTISEMENT

‘ತಲೆಮರೆಸಿಕೊಂಡಿರುವ ಝಾಕಿರ್ ಬೇರೆ–ಬೇರೆ ದೇಶಗಳ ಪೌರತ್ವ ಪಡೆಯಲು ಯತ್ನಿಸುತ್ತಿದ್ದಾನೆ. ಆತನಿಗೆ ಹಣದ ಕೊರತೆಯಿದ್ದು, ಅದಕ್ಕಾಗಿ ಭಾರತದಲ್ಲಿರುವ ತನ್ನ ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ. ಅವನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಅವುಗಳ ಮಾರಾಟಕ್ಕೆ ಕಡಿವಾಣ ಹಾಕಬಹುದು. ಮುಟ್ಟುಗೋಲಿಗೆ ಅನುಮತಿ ನೀಡಬೇಕು’ ಎಂದು ಎನ್‌ಐಎಯು ಅರ್ಜಿ ಸಲ್ಲಿಸಿತ್ತು.

ವಿಶೇಷ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಿತು. ಅದರ ಬೆನ್ನಲ್ಲೇ ಎನ್‌ಐಎಯು ಝಾಕಿರ್‌ಗೆ ಸೇರಿದ ಎರಡು ಫ್ಲ್ಯಾಟ್‌ಗಳನ್ನು ಮತ್ತು ಒಂದು ವಾಣಿಜ್ಯ ಸಂಕೀರ್ಣವನ್ನು ಮುಟ್ಟುಗೋಲು ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.