ADVERTISEMENT

ಪಹಲ್ಗಾಮ್‌ ದಾಳಿ: 1597 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

ಪಿಟಿಐ
Published 15 ಡಿಸೆಂಬರ್ 2025, 16:19 IST
Last Updated 15 ಡಿಸೆಂಬರ್ 2025, 16:19 IST
<div class="paragraphs"><p>ಪಹಲ್ಗಾಮ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲು ಸಾಕ್ಷ್ಯಗಳ ಸಮೇತ ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಸೋಮವಾರ ಹಾಜರಾದರು </p></div>

ಪಹಲ್ಗಾಮ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲು ಸಾಕ್ಷ್ಯಗಳ ಸಮೇತ ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಸೋಮವಾರ ಹಾಜರಾದರು

   

–ಪಿಟಿಐ ಚಿತ್ರ

ಶ್ರೀನಗರ: ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ದಾಳಿಯ ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಮಂಗಳವಾರ 1,597 ಪುಟಗಳ ದೋಷಾರೋಪ ಪಟ್ಟಿಯನ್ನು ಜಮ್ಮುವಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ADVERTISEMENT

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಕಮಾಂಡರ್‌ ಸಾಜಿದ್‌ ಜಾಟ್‌ ಸೇರಿದಂತೆ ಏಳು ಆರೋಪಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿರುವ ಸಾಜಿದ್, ಪಾಕಿಸ್ತಾನದ ಹ್ಯಾಂಡ್ಲರ್‌ ಆಗಿದ್ದು, ಈತನೇ ದಾಳಿಯ ಪ್ರಮುಖ ಸಂಚುಕೋರ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೇ ಎಲ್‌ಇಟಿ ಮತ್ತು ಅದರ ಸಹ ಸಂಘಟನೆ ದಿ ರೆಸಿಸ್ಟೆನ್ಸ್‌ ಫ್ರಂಟ್ (ಟಿಆರ್‌ಎಫ್‌) ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ತಿಳಿಸಲಾಗಿದ್ದು, ಈ ಮೂಲಕ ದಾಳಿಯ ಹಿಂದಿನ ಪಾಕಿಸ್ತಾನದ ಪಿತೂರಿಯನ್ನು ಔಪಚಾರಿಕವಾಗಿ ಎನ್‌ಐಎ ಬಹಿರಂಗಪಡಿಸಿದೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), ಶಸ್ತ್ರಾಸ್ತ್ರ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಹಾಗೂ ಭಾರತದ ವಿರುದ್ಧದ ಯುದ್ಧ ನಡೆಸುವ ಅಪರಾಧಕ್ಕೆ ಸಂಬಂಧಿಸಿದ ಕಾಯ್ದೆಗಳ ಅಡಿಯಲ್ಲಿ ಎಲ್‌ಇಟಿ, ಟಿಆರ್‌ಎಫ್‌ ವಿರುದ್ಧ ಎನ್‌ಐಎ ಆರೋಪಗಳನ್ನು ಹೊರಿಸಿದೆ. 

ಪಹಲ್ಗಾಮ್‌ನಲ್ಲಿ ದಾಳಿ ನಡೆಸಲು ರೂಪಿಸಲಾಗಿದ್ದ ಯೋಜನೆ ಮತ್ತು ಅದಕ್ಕಾಗಿ ಗಡಿಯಾಚೆಯಿಂದ ದೊರೆತಿರುವ ಬೆಂಬಲದ ವಿವರವನ್ನೂ ದೋಷಾರೋಪ ಪಟ್ಟಿ ಒಳಗೊಂಡಿದೆ. ಜತೆಗೆ ಕಳೆದ 8 ತಿಂಗಳ ತನಿಖೆಯಲ್ಲಿ ಸಂಗ್ರಹಿಸಿದ ವಿಧಿವಿಜ್ಞಾನ, ಡಿಜಿಟಲ್‌ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರರಿಗೆ ನೆರವು ಒದಗಿಸಿದ್ದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಪಹಲ್ಗಾಮ್‌ನ ಸ್ಥಳೀಯ ನಿವಾಸಿಗಳಾದ ಪರ್ವೀಜ್‌ ಅಹ್ಮದ್‌, ಬಶೀರ್‌ ಅಹ್ಮದ್‌ ಜೋಥರ್‌ ಹೆಸರನ್ನೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಬಂಧಿತರು ತನಿಖೆಯ ವೇಳೆ, ದಾಳಿಕೋರರ ಗುರುತನ್ನು ಸ್ಪಷ್ಟಪಡಿಸುವುದರ ಜತೆಗೆ ಅವರು ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಒಳನುಸುಳಿದ್ದ ಪಾಕಿಸ್ತಾನಿ ಪ್ರಜೆಗಳು ಎಂಬುದನ್ನು ದೃಢಪಡಿಸಿದ್ದಾರೆ ಎಂದೂ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬೈಸರನ್‌ ಕಣಿವೆಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಏಪ್ರಿಲ್ 22ರಂದು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 25 ಮಂದಿ ಪ್ರವಾಸಿಗರು ಹಾಗೂ ಒಬ್ಬ ಸ್ಥಳೀಯ ನಿವಾಸಿ ಮೃತಪಟ್ಟಿದ್ದರು. ಈ ದಾಳಿ ನಡೆದ ಕೆಲವೇ ವಾರಗಳಲ್ಲಿ ಭಾರತ ಮತ್ತು ‍ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಕಾಲ ಯುದ್ಧವೂ ನಡೆದಿತ್ತು. 

ಹತ್ಯೆಗೀಡಾದ ಉಗ್ರರ ಹೆಸರು ಉಲ್ಲೇಖ:

ಪಹಲ್ಗಾಮ್‌ ದಾಳಿಯ ಬಳಿಕ ಭಾರತೀಯ ಭದ್ರತಾ ಪಡೆಗಳು ಶ್ರೀನಗರದ ಹೊರವಲಯದಲ್ಲಿರುವ ದಾಚಿಗಾಮ್‌ನಲ್ಲಿ ‘ಆಪರೇಷನ್‌ ಮಹಾದೇವ’ ಹೆಸರಿನ ಕಾರ್ಯಾಚರಣೆ ನಡೆಸಿ, ಮೂವರು ಉಗ್ರರನ್ನು ಹೊಡೆದುರುಳಿಸಿದ್ದರು. ಹತ್ಯೆಗೀಡಾದ ಉಗ್ರರನ್ನು ಎಲ್‌ಇಟಿ ಭಯೋತ್ಪಾದಕರಾದ ಫೈಸಲ್‌ ಜಾಟ್‌ ಅಲಿಯಾಸ್‌ ಸುಲೇಮಾನ್‌ ಶಾ, ಹಬೀಬ್‌ ತಹೀರ್‌ ಅಲಿಯಾಸ್‌ ಜಿಬ್ರಾನ್‌, ಹಮ್ಜಾ ಅಫ್ಗಾನಿ ಎಂದು ಗುರುತಿಸಲಾಗಿತ್ತು. ಈ ಮೂವರ ಹೆಸರನ್ನೂ ಎನ್‌ಐಎ ತನ್ನ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಭಯೋತ್ಪಾದನೆಗೆ ಪಾಕ್‌ ಪ್ರಾಯೋಜತ್ವ 

‘ದಾಳಿಕೋರರಿಗೆ ದಕ್ಷಿಣ ಕಾಶ್ಮೀರದಲ್ಲಿ ನೆರವು ದೊರೆತಿತ್ತು. ಹೀಗಾಗಿ ಅವರು ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಲು ಸಾಧ್ಯವಾಗಿತ್ತು. ಈ ಪ್ರಕರಣದ ತನಿಖೆಯಿಂದಾಗಿ ಪಾಕಿಸ್ತಾನವು ಜಮ್ಮು–ಕಾಶ್ಮೀರದಲ್ಲಿ ಟಿಆರ್‌ಎಫ್‌ ರೀತಿಯ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಕೃತ್ಯ ಮುಂದುವರೆಸುತ್ತಿದೆ ಎಂಬುದು ತಿಳಿದುಬಂದಿದೆ. ಕಣಿವೆಯಲ್ಲಿ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಸ್ಥಳೀಯ ಸಂಘಟನೆಗಳೆಂಬ ಬಣ್ಣ ಹಚ್ಚಲು ಟಿಆರ್‌ಎಫ್‌ ಮಾದರಿಯ ಸಂಘಟನೆಗಳನ್ನು ರಚಿಸಲಾಗಿದೆ ಎಂದೂ ಎನ್‌ಐಎ ತಿಳಿಸಿದೆ.

ಘಟನಾವಳಿಗಳ ವಿವರ 

  • ಏಪ್ರಿಲ್‌ 22: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ 25 ಮಂದಿ ಪ್ರವಾಸಿಗರು ಒಬ್ಬ ಸ್ಥಳೀಯ ವ್ಯಕ್ತಿಯ ಹತ್ಯೆ

  • ಮೇ7–10: ಭಾರತ– ಪಾಕಿಸ್ತಾನದ ನಡುವೆ ಸಂಘರ್ಷ

  • ಜೂನ್‌ 22: ದಾಳಿಕೋರರಿಗೆ ನೆರವು ನೀಡಿದ್ದ ಇಬ್ಬರು ಸ್ಥಳೀಯರ ಬಂಧನ

  • ಜುಲೈ 28: ಆಪರೇಷನ್‌ ಮಹಾದೇವ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.