ADVERTISEMENT

ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಐಇಡಿ ವಶ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 14:24 IST
Last Updated 23 ಡಿಸೆಂಬರ್ 2021, 14:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮುವಿನ ಭಾರತೀಯ ವಾಯುಪಡೆ(ಐಎಎಫ್‌) ನಿಲ್ದಾಣದ ಬಳಿ ಸುಧಾರಿತ ಸ್ಫೋಟಕ ಸಾಮಗ್ರಿ ವಶಪಡಿಸಿಕೊಂಡ ಪ್ರಕರಣ ಸಂಬಂಧ ಮೂವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವು ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ನದೀಂ ಉಲ್‌ ಹಕ್‌, ನದೀಂ ಅಯುಬ್‌ ರಾಥರ್‌ ಹಾಗೂ ತಾಲಿಬ್‌ ಉರ್‌ ರೆಹಮಾನ್‌ ಎಂಬ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 120ಬಿ, 121ಎ, 122 ಹಾಗೂ 1967ರ ಯುಎ(ಪಿ) ಕಾಯ್ದೆ 18, 18ಬಿ, 19, 20, ಹಾಗೂ 23 ರಡಿ ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಕಳೆದ ಜೂನ್‌ 27ರಂದು ಸ್ಫೋಟಕ ತುಂಬಿದ ಎರಡು ಡ್ರೋನ್‌ಗಳು ಜಮ್ಮುವಿನ ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆ (ಐಎಎಫ್‌) ಕಟ್ಟಡವೊಂದರ ಮೇಲೆ ಅಪ್ಪಳಿಸಿದ್ದವು. ಈ ಘಟನೆ ಜರುಗಿದ ಕೆಲವೇ ಗಂಟೆಗಳಲ್ಲೇ ಇಲ್ಲಿನ ನರ್ವಲ್‌ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಧಾರಿತ ಸ್ಫೋಟಕ ಸಾಮಗ್ರಿ ವಶಪಡಿಸಿಕೊಳ್ಳಲಾಗಿತ್ತು.

ADVERTISEMENT

‘ಜಮ್ಮುವಿನ ಪ್ರಮುಖ ಧಾರ್ಮಿಕ ಸ್ಥಳವೊಂದರಲ್ಲಿ ಸ್ಫೋಟ ನಡೆಸುವ ಸಲುವಾಗಿ ಆರೋಪಿಗಳು ಸ್ಪೋಟಕ ಸಾಮಗ್ರಿ ಸಾಗಿಸುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದ ಈ ಮೂವರು ಆರೋಪಿಗಳು ವಾಟ್ಸ್‌ಆ್ಯಪ್‌ ಮೂಲಕ ಪಾಕಿಸ್ತಾನ ಟಿಆರ್‌ಎಫ್‌ ಸಂಘಟನೆ ಸಂದೇಶಗಳನ್ನು ಪಡೆಯುತ್ತಿದ್ದರು’ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದರು.

'ದೇಶದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಮೂಲದ ಟಿಆರ್‌ಎಫ್‌ ಸಂಘಟನೆಯು ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರನ್ನು ಸೆಳೆಯುವ ಯೋಜನೆ ರೂಪಿಸಿತ್ತು. ಅಲ್ಲದೇ ದೇಶದ ವಿರುದ್ಧ ದೊಡ್ಡ ಪಿತೂರಿ ನಡೆಸಿತ್ತು' ಎಂದು ಎನ್‌ಐಎ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಂತರ ಈ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.