ADVERTISEMENT

ಪುಲ್ವಾಮಾ ದಾಳಿ ಪ್ರಕರಣ: ಉಗ್ರ ಅಜರ್ ಸೇರಿ 19 ಜನರ ವಿರುದ್ಧ ದೋಷಾರೋಪ ಪಟ್ಟಿ

ಪಿಟಿಐ
Published 25 ಆಗಸ್ಟ್ 2020, 12:29 IST
Last Updated 25 ಆಗಸ್ಟ್ 2020, 12:29 IST
ಪುಲ್ವಾಮಾ ದಾಳಿ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ದಾಖಲಿಸಲು ಎನ್ಐಎ ಅಧಿಕಾರಿಗಳು ಕೋರ್ಟಿಗೆ ಬರುತ್ತಿರುವುದು
ಪುಲ್ವಾಮಾ ದಾಳಿ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ದಾಖಲಿಸಲು ಎನ್ಐಎ ಅಧಿಕಾರಿಗಳು ಕೋರ್ಟಿಗೆ ಬರುತ್ತಿರುವುದು   

ಜಮ್ಮು: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆಬ್ರುವರಿ 14ರಂದು ನಡೆದಿದ್ದ ಉಗ್ರರ ದಾಳಿ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಲ್ಲಿನ ವಿಶೇಷ ಕೋರ್ಟ್‌ನಲ್ಲಿ, ನಿಷೇಧಿತ ಉಗ್ರ ಸಂಘಟನೆ ಜೈಷ್–ಇ–ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸೇರಿದಂತೆ 19 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಒಟ್ಟು 13,500 ಪುಟಗಳ ದೋಷಾರೋಪ ಪಟ್ಟಿಯನ್ನು ದಾಖಲಿಸಲಾಗಿದೆ.ಸಿಆರ್‌ಪಿಎಫ್‌ ಬೆಂಗಾವಲು ವಾಹನದ ಮೇಲೆ ಉಗ್ರ ಸಂಘಟನೆಯು ಆತ್ಮಹತ್ಯಾ ದಾಳಿ ನಡೆಸಿದ್ದು, 40 ಯೋಧರು ಮೃತಪಟ್ಟಿದ್ದರು.

ಭಿನ್ನ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಉಗ್ರರ ಪರ ಅನುಕಂಪವುಳ್ಳವರು, ಭಯೋತ್ಪಾದಕರ ಹೇಳಿಕೆ ಹಾಗೂ ಲಭ್ಯವಿದ್ದ ವಿದ್ಯುನ್ಮಾನ ಸಾಕ್ಷ್ಯಗಳನ್ನು ಆಧರಿಸಿ ಈ ಪ್ರಕರಣವನ್ನು ಭೇದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶಂಕಿತರಿಗೆ ಆಶ್ರಯ ನೀಡಿದ ಹಾಗೂ 200 ಕೆ.ಜಿ ಸ್ಫೋಟಕಗಳನ್ನು ಒಯ್ದು ಕೃತ್ಯ ಎಸಗಿದ್ದ, ಆತ್ಮಹತ್ಯಾ ಬಾಂಬರ್ ಅದಿಲ್ ದರ್‌ನ ಕೊನೆಯ ವಿಡಿಯೊ ಮಾಡಿದ್ದವರ ಹೆಸರುಗಳನ್ನು ದೋಷಾರೋಪ ಪಟ್ಟಿ ಒಳಗೊಂಡಿದೆ.

ಎನ್ಐಎ ಜಂಟಿ ನಿರ್ದೇಶಕ ಅನಿಲ್ ಶುಕ್ಲಾ ತನಿಖೆಯ ನೇತೃತ್ವ ವಹಿಸಿದ್ದರು. ಉಗ್ರರು ಕೃತ್ಯ ಎಸಗಲು ಉನ್ನತ ಸಾಮರ್ಥ್ಯದ ಬ್ಯಾಟರಿ, ಫೋನ್ ಮತ್ತು ಕೆಲ ರಾಸಾಯನಿಕ ವಸ್ತುಗಳ ಖರೀದಿಗೆ ಇ-ವೇದಿಕೆಗಳನ್ನು ಬಳಸಿದ್ದು ತನಿಖೆಯಿಂದ ತಿಳಿದುಬಂದಿತ್ತು.

ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಏಳು ಜನರನ್ನು ಎನ್ಐಎ ಬಂಧಿಸಿದೆ. ವಿವಿಧ ಚಕಮಕಿಗಳಲ್ಲಿ ಮೃತಪಟ್ಟಿರುವ ಏಳು ಮಂದಿ ಉಗ್ರರು ಹಾಗೂ ತಲೆ ಮರೆಸಿಕೊಂಡಿರುವ ನಾಲ್ವರ ಹೆಸರನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ತಲೆಮರೆಸಿಕೊಂಡಿರುವವರಲ್ಲಿ ಒಬ್ಬ ಪಾಕಿಸ್ತಾನದ ಪ್ರಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.