ADVERTISEMENT

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ

ಪಿಟಿಐ
Published 15 ಜುಲೈ 2019, 20:00 IST
Last Updated 15 ಜುಲೈ 2019, 20:00 IST
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ   

ನವದೆಹಲಿ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಹೆಚ್ಚಿನ ದಂಡ ವಿಧಿಸುವ, ಅಪಘಾತಕ್ಕೆ ತುತ್ತಾದವರಿಗೆ ನೆರವಾಗುವವರಿಗೆ ರಕ್ಷಣೆ ನೀಡುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಸೋಮವಾರ ಪುನಃ ಲೋಕಸಭೆಯಲ್ಲಿ ಮಂಡಿಸಲಾಯಿತು.

ಉದ್ದೇಶಿತ ಹೊಸ ಕಾಯ್ದೆಯ ಬಗ್ಗೆ ಕೆಲವು ಸದಸ್ಯರು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ‘ರಾಜ್ಯ ಸರ್ಕಾರದ ಹಕ್ಕುಗಳನ್ನು ಕೇಂದ್ರ ಕಿತ್ತುಕೊಳ್ಳುವುದಿಲ್ಲ. ಹೊಸ ಕಾಯ್ದೆಯು ಹೆಚ್ಚು ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ. ಆದ್ದರಿಂದ ಈ ಮಸೂದೆಗೆ ಅಂಗೀಕಾರ ನೀಡಬೇಕು’ ಎಂದು ಮನವಿ ಮಾಡಿದರು. ಕಳೆದ ಲೋಕಸಭೆಯಲ್ಲೇ ಈ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರ ಲಭಿಸಿರಲಿಲ್ಲ.

ನಿಯಮಾವಳಿ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಪ್ರಮಾಣವನ್ನು ಹೆಚ್ಚಿಸುವುದು, ಆನ್‌ಲೈನ್‌ ಮೂಲಕ ವಾಹನ ಚಾಲನೆ ಕಲಿಕಾ ಪರವಾನಗಿ ನೀಡಲು ವ್ಯವಸ್ಥೆ ರೂಪಿಸುವುದು, ಅಪಘಾತಕ್ಕೆ ತುತ್ತಾದವರಿಗೆ ವಿಮೆಯ ಮೊತ್ತವನ್ನು ತ್ವರಿತವಾಗಿ ನೀಡುವಂತಾಗಲು ವ್ಯವಸ್ಥೆಯನ್ನು ಸರಳಗೊಳಿಸುವುದೇ ಮುಂತಾದ ಪ್ರಸ್ತಾವಗಳನ್ನು ಹೊಸ ಮಸೂದೆಯಲ್ಲಿ ಮಂಡಿಸಲಾಗಿದೆ.

ADVERTISEMENT

ವಾಣಿಜ್ಯ ವಾಹನಗಳ ಚಾಲನಾ ಪರವಾನಗಿಯ ಅವಧಿ ಮುಗಿದ ನಂತರ, ಅದರ ನವೀಕರಣದ ಅವಧಿಯನ್ನು ಈಗ ಇರುವ ಮೂರು ವರ್ಷಗಳ ಬದಲು ಐದು ವರ್ಷಗಳಿಗೆ ಹೆಚ್ಚಿಸುವುದು, ಚಾಲನಾ ಪರವಾನಗಿಯ ಅವಧಿ ಮುಗಿಯುವುದಕ್ಕೂ ಒಂದು ವರ್ಷ ಮುನ್ನ ಅಥವಾ ಅವಧಿ ಮುಗಿದ ನಂತರ ಒಂದು ವರ್ಷದೊಳಗೆ ಅದನ್ನು ನವೀಕರಿಸಲು ಅವಕಾಶ ನೀಡುವುದು (ಪ್ರಸಕ್ತ ಇರುವ ನಿಯಮಗಳ ಪ್ರಕಾರ ಅವಧಿ ಮುಗಿದು ಒಂದು ತಿಂಗಳೊಳಗೆ ನವೀಕರಿಸಬೇಕು) ಮುಂತಾದವು ಮಸೂದೆಯಲ್ಲಿ ಸೇರಿವೆ.

‘ರಾಜ್ಯಗಳ ಸಾರಿಗೆ ಸಚಿವರ ಜೊತೆ ಚರ್ಚಿಸಿಯೇ ಈ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದರೆ ಈಗಲೂ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಸಿದ್ಧರಿದ್ದೇವೆ. ಹೊಸ ಕಾನೂನನ್ನು ಜಾರಿಗೊಳಿಸುವುದು ಕಡ್ಡಾಯವಲ್ಲ. ಆಯ್ಕೆಯ ಹಕ್ಕು ರಾಜ್ಯ ಸರ್ಕಾರಗಳಿಗೆ ಇರುತ್ತದೆ’ ಎಂದು ಗಡ್ಕರಿ ತಿಳಿಸಿದರು.

‘ದೇಶದಲ್ಲಿ ಶೇ 30ರಷ್ಟು ಮಂದಿ ನಕಲಿ ಪರವಾನಗಿಗಳನ್ನು ಹೊಂದಿದ್ದಾರೆ. ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ಸಾಯುತ್ತಿದ್ದಾರೆ ಮತ್ತು 5 ಲಕ್ಷ ಮಂದಿ ಗಾಯಗೊಳ್ಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಅಪಘಾತಗಳು ಮತ್ತು ಸಂತ್ರಸ್ತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ’ ಎಂದು ಗಡ್ಕರಿ ಲೋಕಸಭೆಗೆ ತಿಳಿಸಿದರು.

ಮಸೂದೆಯನ್ನು ವಿರೋಧಿಸಿದ ಟಿಎಂಸಿ ನಾಯಕ ಸೌಗತ್‌ ರಾಯ್‌, ‘ಮಸೂದೆಯಲ್ಲಿ ಮಂಡಿಸಲಾದ ಕೆಲವು ಪ್ರಸ್ತಾವಗಳು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುತ್ತವೆ’ ಎಂದರು.

‘ನಾವು ಮಸೂದೆಯನ್ನು ಒಟ್ಟಾರೆಯಾಗಿ ವಿರೋಧಿಸುವುದಿಲ್ಲ. ಆದರೆ ಕೆಲವು ಪ್ರಸ್ತಾವಗಳ ಬಗ್ಗೆ ನಮ್ಮ ವಿರೋಧವಿದೆ’ ಎಂದು ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.