ನವದೆಹಲಿ: ನಿಲಂಬೂರು–ನಂಜನಗೂಡು ರೈಲು ಮಾರ್ಗ ಯೋಜನೆಗೆ ಮರುಜೀವ ನೀಡಲು ಮುಂದಾಗಿರುವ ರೈಲ್ವೆ ಇಲಾಖೆಯು ಇದೀಗ ಕಾರ್ಯಸಾಧ್ಯತಾ ಅಧ್ಯಯನ ಕೈಗೆತ್ತಿಕೊಂಡಿದೆ.
236 ಕಿ.ಮೀ ಉದ್ದದ ಮಾರ್ಗದ ಈ ಯೋಜನೆಯು ಕರ್ನಾಟಕ, ತಮಿಳುನಾಡು ಹಾಗೂ ಕೇರಳವನ್ನು ಸಂಪರ್ಕಿಸುತ್ತದೆ. ಕರ್ನಾಟಕದ ಬಂಡೀಪುರ, ತಮಿಳುನಾಡಿನ ಮಧುಮಲೆ ಹಾಗೂ ಕೇರಳದ ವಯನಾಡು ಸಂರಕ್ಷಿತ ಅರಣ್ಯ ಪ್ರದೇಶದ ಮೂಲಕ ಈ ಮಾರ್ಗ ಹಾದು ಹೋಗುತ್ತದೆ. ಹಾಗಾಗಿ, ಈ ಯೋಜನೆಗೆ ಕರ್ನಾಟಕ ಸರ್ಕಾರ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಸರ್ಕಾರದ ಮನವೊಲಿಕೆಗೆ ಕೇರಳ ಸರ್ಕಾರ ಹಲವು ಸಲ ಪ್ರಯತ್ನಿಸಿತ್ತು. ಆದರೆ, ರಾಜ್ಯ ಸರ್ಕಾರ ಒಪ್ಪಿರಲಿಲ್ಲ.
ಈ ಮಾರ್ಗ ನಿರ್ಮಾಣಕ್ಕೆ 2007–08ರಲ್ಲಿ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿತ್ತು. ಪ್ರಯಾಣಿಕರ ದಟ್ಟಣೆ ಕಡಿಮೆ ಇರಲಿದ್ದು, ಯೋಜನೆ ಅನುಷ್ಠಾನ ಕಾರ್ಯಸಾಧುವಲ್ಲ ಎಂದು ಸಮೀಕ್ಷೆ ವರದಿ ತಿಳಿಸಿತ್ತು. ಹೀಗಾಗಿ, ಪ್ರಸ್ತಾವ ನನೆಗುದಿಗೆ ಬಿದ್ದಿತ್ತು.
ಕೇರಳ ಸರ್ಕಾರ ಹಾಗೂ ಅಲ್ಲಿನ ನಾಗರಿಕರ ಒತ್ತಡದ ಮೇರೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ರೈಲ್ವೆ ಇಲಾಖೆಯು ಅಂತಿಮ ಸ್ಥಳ ಸಮೀಕ್ಷೆ ನಡೆಸಲು 2023ರಲ್ಲಿ ಮಂಜೂರಾತಿ ನೀಡಿತ್ತು. ಯೋಜನೆಯು ಕರ್ನಾಟಕ ಹಾಗೂ ಕೇರಳದ ಅರಣ್ಯ ಭಾಗಗಳಲ್ಲಿ ಹಾದು ಹೋಗುವುದರಿಂದ ಎರಡೂ ರಾಷ್ಟ್ರಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಅರಣ್ಯ ಮತ್ತು ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿದ ನಂತರ ಯೋಜನಾ ವರದಿಯನ್ನು ಅಂತಿಮಗೊಳಿಸಲಾಗುವುದು’ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿತ್ತು.
ತಲಶ್ಶೇರಿ–ಮೈಸೂರು ರೈಲು ಮಾರ್ಗ ನಿರ್ಮಾಣಕ್ಕೆ 2008–2009ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. 2018ರಲ್ಲಿ ಮತ್ತೊಮ್ಮೆ ಸಮೀಕ್ಷೆ ಮಾಡಲಾಗಿತ್ತು. ಈ ಮಾರ್ಗ ನಿರ್ಮಾಣಕ್ಕೆ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಾರ್ಗವು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗಲಿದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ, ನಂಜನಗೂಡು–ನಿಲಂಬೂರು ಹಾಗೂ ತಲಶ್ಶೇರಿ–ಮೈಸೂರು ಮಾರ್ಗ ಸಂಯೋಜಿಸಿ ಹೊಸ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.