ADVERTISEMENT

ನಾಲ್ಕು ತಿಂಗಳಲ್ಲಿ ಒಂಬತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ

ಮುಂದೆಯೂ ಉಗ್ರರ ದಾಳಿ ಹೆಚ್ಚುವ ಸಾಧ್ಯತೆ: ಭದ್ರತಾ ಸಂಸ್ಥೆಗಳ ಆತಂಕ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 8:35 IST
Last Updated 31 ಅಕ್ಟೋಬರ್ 2020, 8:35 IST
ಜಮ್ಮ ಮತ್ತು ಕಾಶ್ಮೀರದ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಜಮ್ಮುವಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ಪಾಕ್ ಪ್ರಧಾನಿ ಇಮ್ರಾನ್‌ ಖಾನ್ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಜಮ್ಮ ಮತ್ತು ಕಾಶ್ಮೀರದ ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಜಮ್ಮುವಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶುಕ್ರವಾರ ಪಾಕ್ ಪ್ರಧಾನಿ ಇಮ್ರಾನ್‌ ಖಾನ್ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಿದರು.   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ, ಕಳೆದ ನಾಲ್ಕು ತಿಂಗಳಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಒಂಬತ್ತು ನಾಯಕರು ಮತ್ತು ಕಾರ್ಯಕರ್ತರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.

ಈ ಘಟನೆಯಿಂದಾಗಿ ಮುಂದೆ ಜಿಲ್ಲಾ ಅಭಿವೃದ್ಧಿ ಮಂಡಳಿ ಮತ್ತು ತೆರೆವಾಗಿರುವ ಪಂಚಾಯತ್‌ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಸಮಯದಲ್ಲಿ ಮತ್ತಷ್ಟು ಜೀವಗಳು ನಷ್ಟವಾಗಬಹುದು ಎಂದು ಭದ್ರತಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಎರಡು ಪ್ರಮುಖ ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), 2018 ರಲ್ಲಿ ಪಂಚಾಯತ್ ಮತ್ತು ಪುರಸಭೆ ಚುನಾವಣೆ ಬಹಿಷ್ಕರಿಸಿದ್ದವು. ಅದೇ ರೀತಿ ಮುಂಬರುವ ಈ ಚುನಾವಣೆಗಳನ್ನು ಬಹಿಷ್ಕರಿಸುವ ಸಾಧ್ಯತೆಯಿದೆ. ಇಂಥ ವೇಳೆ ಯಲ್ಲಿ ಉಗ್ರರು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ

‘ಈಗಾಗಲೇ ನೂರಾರು ಬಿಜೆಪಿ ಕಾರ್ಯಕರ್ತರನ್ನು ಸುರಕ್ಷತಾ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ಕೆಲವರಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ. ಇದರ ಹೊರತಾಗಿ, ಕಣಿವೆ ರಾಜ್ಯದ ಮೂಲೆಗಳಲ್ಲಿ ನಡೆಯುವ ಇಂಥ ದಾಳಿಗಳನ್ನು ತಡೆಯುವುದು ಅಸಾಧ್ಯವಾಗಿದೆ. ಹೀಗಾಗಿ ಉಗ್ರರು ಅಂಥ ಸ್ಥಳದಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸುತ್ತಾರೆ‘ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರವಹಿಸಿಕೊಂಡ ಲೆಫ್ಟಿನೆಂಟ್ ಗವರ್ನರ್‌ ಮನೋಜ್ ಸಿನ್ಹಾ ಅವರು, ‘ಪಂಚಾಯತ್ ಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ನೀಡಲು ರೂಪಿಸುವ ಕಾರ್ಯತಂತ್ರದ ಬಗ್ಗೆ ಜಾಗರೂಕವಾಗಿರಬೇಕು‘ ಎಂದು ಹೇಳಿದ್ದರು.

ಅವರ ಈ ಎಚ್ಚರಿಕೆ ನಂತರವೂ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಖಾಜಿಗುಂಡ್‌ ಪ್ರದೇಶದಲ್ಲಿ ಗುರುವಾರ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದ್ದು, ಇದು ಭದ್ರತಾ ಸಂಸ್ಥೆಗಳಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಪೊಲೀಸರ ಪ್ರಕಾರ ಈ ಮೂವರು ಕಾರ್ಯಕರ್ತರನ್ನು ‘ಲಷ್ಕರ್ – ಎ ತೊಯ್ಬಾ ಮತ್ತು ದಿ ರೆಸಿಸ್ಟೆನ್ಸ್‌ ಫ್ರಂಟ್‌(ಟಿಆರ್‌ಎಫ್‌) ಉಗ್ರರರು ಹತ್ಯೆ ಮಾಡಿದ್ದಾರೆ.

ಜುಲೈನಿಂದ ಅಕ್ಟೋಬರ್‌ವರೆಗೆ..

ಜುಲೈನಿಂದ ಅಕ್ಟೋಬರ್‌ವರೆಗೆ ಉಗ್ರರು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದಾರೆ.

ಜುಲೈ 8 ರಂದು, ಉತ್ತರ ಕಾಶ್ಮೀರದ ಬಂಡಿಪೊರದಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶೇಖ್ ವಸೀಮ್ ಬ್ಯಾರಿ, ಅವರ ತಂದೆ ಬಶೀರ್ ಅಹ್ಮದ್ ಮತ್ತು ಸಹೋದರ ಶೇಖ್ ಉಮರ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಹತ್ತು ಮಂದಿ ಪೊಲೀಸರ ರಕ್ಷಣೆಯ ನಡುವೆಯೂ, ಬ್ಯಾರಿ ಅವರ ಮೇಲೆ ಉಗ್ರರು ದಾಳಿ ನಡೆಸಿ, ಈ ಕೃತ್ಯ ಎಸಗಿದ್ದರು.

ಆಗಸ್ಟ್‌ 6ರಂದು ಕಾಜಿಗುಂಡ್‌ನ ವೆಸ್ಸುವಿನಲ್ಲಿ ಬಿಜೆಪಿಯ ಸರ್‌ಪಂಚ್‌ ಸಜಾದ್ ಅಹ್ಮದ್‌ ಖಂಡೆಯನ್ನು ಅವರ ನಿವಾಸದಲ್ಲೇ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದರು.

ಆಗಸ್ಟ್‌ 9 ರಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ ಜನರ್ ಅವರು ಬುಡ್ಗಾಂನ ಓಂಪೊರಾದಲ್ಲಿ ಮುಂಜಾನೆ ವಾಯುವಿಹಾರ ಮಾಡುತ್ತಿದ್ದಾಗ ಉಗ್ರರು ಕೊಂದರು.

ಸೆಪ್ಟೆಂಬರ್ 23ರಂದು ಬುಡ್ಗಾಂನಲ್ಲಿನ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಅಧ್ಯಕ್ಷ ಖಾಗ್ ಹಾಗೂ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದ ಭೂಪಿಂದರ್ ಸಿಂಗ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು.

ಈಗ ಅಕ್ಟೋಬರ್‌ 29ರಂದು, ಕುಲ್ಗಾಮ್‌ ಜಿಲ್ಲೆಯ ಖಾಜಿಗುಂಡ್‌ ಪ್ರದೇಶದಲ್ಲಿ ಮೂವರು ಕಾರ್ಯಕರ್ತರನ್ನು

‘ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ಮಾಡಲು ಪಾಕಿಸ್ತಾನ ಉಗ್ರರರಿಗೆ ನಿರ್ದೇಶನ ನೀಡುತ್ತಿದೆ ಎಂಬ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದಾಳಿಗಳು ಸಂಭವಿಸುವ ಸಾಧ್ಯತೆ ಇದೆ‘ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.