ADVERTISEMENT

ಮಾದಕ ವಸ್ತು ಸಾಗಣೆ: 9 ಜನರ ಬಂಧನ

ಜಮ್ಮು–ಕಾಶ್ಮೀರದ ವಿವಿಧೆಡೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 18:22 IST
Last Updated 24 ಏಪ್ರಿಲ್ 2019, 18:22 IST

ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ, ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ಮಾದಕ ವಸ್ತು ಸಾಗಣೆ ಆರೋಪದ ಮೇಲೆ ಪೊಲೀಸರು ಬುಧವಾರ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಬಂಧಿತರಿಂದ ದೊಡ್ಡ ಪ್ರಮಾಣಲ್ಲಿ ಮಾದಕ ವಸ್ತು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪಂಜಾಬ್‌ನ ಲುಧಿಯಾನದ ನಿವಾಸಿ ಜಗದೇವ್‌ ಸಿಂಗ್‌ ಮತ್ತು ಜಲಂಧರ್‌ನ ಬಾಲ್ಕರ್‌ ಸಿಂಗ್‌ ಅವರನ್ನು ಉಧಮ್‌ಪುರ ಜಿಲ್ಲೆಯ ಚೆನಾನಿಯಲ್ಲಿ ಬಂಧಿಸಿದ್ದಾರೆ. ಅವರಿಂದ 203 ಕೆ.ಜಿಯಷ್ಟು ಗಸಗಸೆಯನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಉಧಮ್‌ಪುರದ ಮಾರುಕಟ್ಟೆಯಲ್ಲಿ ನಿಕ್ಲೇಶ್‌, ವಿಕಾಸ್‌ ಠಾಕೂರ್‌ ಅವರಿಂದ 15 ಗ್ರಾಂ ಹೆರಾಯಿನ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಬಾರಮುಲ್ಲಾ ಜಿಲ್ಲೆಯ ವಾಹಿದ್‌ ಅಹ್ಮದ್‌, ಅಬ್ದುಲ್‌ ಕಯೂಮ್‌ ಮತ್ತು ನಾಸಿರ್‌ ಅಹ್ಮದ್‌ ಹಾಗೂ ಜಮ್ಮುವಿನ ಚರಣ್‌ ಸಿಂಗ್‌ ಅನ್ನು ಸೆರೆಹಿಡಿಯಲಾಗಿದೆ. ಅವರ ಬಳಿಯಿದ್ದ 100 ಗ್ರಾಂ ಹೆರಾಯಿನ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸ್‌ ತಂಡ ಜಮ್ಮುವಿನ ಇಂದಿರಾನಗರದ ಬಲೋಲ್‌ ಬಳಿ ವಾಹನ
ವೊಂದರಲ್ಲಿ ₹ 2.76 ಕೋಟಿ ವಶಕ್ಕೆ ಪಡೆದಿರುವುದಾಗಿ ಪೊಲೀಸ್‌ ವಕ್ತಾರರು ಮಾಹಿತಿ ನೀಡಿದ್ದಾರೆ.

ಅನಂತನಾಗ್‌ ಜಿಲ್ಲೆಯ ಬಷೀರ್‌ ಅಹ್ಮದ್‌ ಅನ್ನು ಸಾಂಬಾ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಅವರ ಬಳಿಯಿದ್ದ 50 ಗ್ರಾಂ ಚರಸ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ‘ನಾರ್ಕೊಟಿಕ್‌ ಡ್ರಗ್ಸ್ ಅಂಡ್‌ ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್‌‘ (ಎನ್‌ಡಿಪಿಎಸ್‌) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.