
ಬಿಜಾಪುರ (ಛತ್ತೀಸಗಢ): ಕಳೆದ ಮೇನಲ್ಲಿ ಪೊಲೀಸ್ ಕಾರಿನ ಮೇಲೆ ಕಚ್ಚಾ ಬಾಂಬ್ ದಾಳಿ ನಡೆಸಿದ್ದ 5 ಆರೋಪಿಗಳು ಸೇರಿ 9 ಮಂದಿ ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜಾಪುರ ಜಿಲ್ಲೆಯ ಫರ್ಸೆಗಢ ಠಾಣಾ ವ್ಯಾಪ್ತಿಯ ಮಂಡೆಮ್–ಕುಪರೆಲ್ ಗ್ರಾಮದಲ್ಲಿ ಐವರು ನಕ್ಸಲರನ್ನು, ಮಡ್ಡೆಡ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇವರು ಕೊಲೆ, ಸುಲಿಗೆ, ಕಚ್ಚಾ ಬಾಂಬ್ ದಾಳಿ, ರಸ್ತೆ–ಸೇತುವೆಗಳನ್ನು ಹಾಳು ಮಾಡುವುದು ಹಾಗೂ ಮಾವೋವಾದಿ ಪೋಸ್ಟರ್‌ಗಳನ್ನು ಅಂಟಿಸುವ ಮತ್ತು ಕರಪತ್ರಗಳನ್ನು ಹಂಚುವ ದುಷ್ಕೃತ್ಯಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫರ್ಸೆಗಢ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾದ ಆರೋಪಿಗಳನ್ನು ಗುಡ್ಡು ಕುಮ್ಮ(25), ಬುದ್ಧು ಕುಮ್ಮ(30), ಸುರೇಶ್ ಓಯಂ(29), ವಿನೋದ್ ಕೋರ್ಸಾ(25) ಹಾಗೂ ಮುನ್ನಾ ಕುಮಾರ್(25) ಎಂದು ಗುರುತಿಸಲಾಗಿದೆ. ಕಳೆದ ಮೇ15ರಂದು ಫರ್ಸೆಗಢ ಪ್ರದೇಶದಲ್ಲಿ ಪೊಲೀಸ್ ಕಾರಿನ ಮೇಲೆ ಕಚ್ಚಾ ಬಾಂಬ್ ದಾಳಿ ನಡೆಸಿದ್ದು ಇವರೇ ಎಂದು ಶಂಕಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತರಿಂದ ಸ್ಫೋಟಕಗಳು, ಸುರಕ್ಷಾ ಫ್ಯೂಸ್(ವಿದ್ಯುತ್ ತಂತಿ), ಜಿಲೆಟಿನ್ ಕಡ್ಡಿಗಳು, ಮಾವೋವಾದಿಗೆ ಸಂಬಂಧಿಸಿದ ಪೋಸ್ಟರ್ ಹಾಗೂ ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.