ADVERTISEMENT

ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ನೀರವ್‌–ಚೋಕ್ಸಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 10:29 IST
Last Updated 27 ಜುಲೈ 2018, 10:29 IST
   

ಮುಂಬೈ(ಪಿಟಿಐ): ಪಿಎನ್‌ಬಿ ಹಗರಣದ ರೂವಾರಿ ನೀರವ್‌ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿಗೆ ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ಸೆಪ್ಟೆಂಬರ್‌ 25 ಮತ್ತು 26ರಂದು ಕೋರ್ಟ್‌ಗೆ ಹಾಜರಾಗಲು ಪಿಎಂಎಲ್‌ಎ ನ್ಯಾಯಾಲಯವು ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) 13,000 ಕೋಟಿ ವಂಚಿಸಿರುವ ಈ ಆರೋಪಿಗಳ ವಿರುದ್ಧ ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಬೇಕು ಮತ್ತು ₹3,500 ಕೋಟಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಈಚೆಗೆ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ಮನವಿ ಆಲಿಸಿದ ನ್ಯಾಯಾಲಯವು, ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ನೀರವ್‌ ಮೋದಿ ಸೆ.25ರಂದು ಮತ್ತು ಸೆ.26ರಂದು ಮೆಹುಲ್‌ ಚೋಕ್ಸಿ ಹಾಜರಾಗಬೇಕೆಂದು ನೋಟಿಸ್‌ನಲ್ಲಿ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಅಡಿ ಈ ಹಿಂದೆಯೇ ಎರಡು ಪ್ರತ್ಯೇಕ ಪ್ರಕರಣಗಳನ್ನು ಇವರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿತ್ತು. ಈ ಇಬ್ಬರ ವಿರುದ್ಧವೂ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿದೆ.

ಬ್ಯಾಂಕ್‌ಗಳಿಗೆ ₹9,000 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ವಿರುದ್ಧವೂ ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳುವಂತೆ ಇ.ಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಆಗಸ್ಟ್ 27ರಂದು ಹಾಜರಾಗುವಂತೆ ಮಲ್ಯಗೆ ಕೋರ್ಟ್‌ ನೋಟಿಸ್‌ ನೀಡಿದೆ.

‘ದೇಶ ಭ್ರಷ್ಟ ಆರ್ಥಿಕ ಅಪರಾಧಿ’ ಮಸೂದೆ ಜುಲೈ 19ರಂದು ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ಬುಧವಾರ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.