ಲಂಡನ್:ಭಾರತದ ಬ್ಯಾಂಕುಗಳಿಗೆ ಬಹುಕೋಟಿ ವಂಚಿಸಿದ ಆರೋಪ ಹೊತ್ತ, ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ನೀರವ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಇಲ್ಲಿನ ಕೋರ್ಟ್, ಅವರನ್ನು ಈ ತಿಂಗಳ 29ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಅವರನ್ನು ಭಾರತಕ್ಕೆ ಗಡಿಪಾರುಮಾಡುವ ಕುರಿತ ಅರ್ಜಿ ವಿಚಾರಣೆಯನ್ನು 29ಕ್ಕೆ ಮುಂದೂಡಿದೆ.
ಭಾರತದ ಜಾರಿ ನಿರ್ದೇಶನಾಲಯ (ಇ.ಡಿ) ಮಂಡಿಸಿದ್ದ ವಾದ ಮಾನ್ಯ ಮಾಡಿದ ವೆಸ್ಟ್‌ಮಿನ್‌ಸ್ಟರ್ ಕೋರ್ಟ್, ನೀರವ್ ಮೋದಿ ಬಂಧನಕ್ಕೆ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ, ಲಂಡನ್‌ನ ವೆಸ್ಟ್‌ಎಂಡ್‌ನಲ್ಲಿರುವ ಸೆಂಟರ್ ಪಾಯಿಂಟ್‌ನ ಐಷಾರಾಮಿ ಅಪಾರ್ಟ್‌ಮೆಂಟ್ ನಲ್ಲಿ ಮೋದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ₹ 13,500 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ನೀರವ್ ಮೋದಿಯನ್ನು ಇಂಗ್ಲೆಂಡ್‌ನಿಂದ ಗಡಿಪಾರು ಮಾಡಬೇಕು ಎಂಬ ಭಾರತದ ಯತ್ನಕ್ಕೆ ಈ ಬೆಳವಣಿಗೆಯಿಂದ ಬಲ ಬಂದಂತಾಗಿದೆ. ನೀರವ್ ಚಿಕ್ಕಪ್ಪ ಮೆಹುಲ್ ಚೋಕ್ಸಿ ಈ ಪ್ರಕರಣದ ಎರಡನೇ ಆರೋಪಿ.
ವಾಹನ, ಕಲಾಕೃತಿ ಹರಾಜು: ನೀರವ್ ಮೋದಿಗೆ ಸೇರಿದ 173 ಕಲಾಕೃತಿ ಹಾಗೂ ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಮುಂಬೈನ ವಿಶೇಷ ಕೋರ್ಟ್ ಜಾರಿನಿರ್ದೇಶನಾಲಯಕ್ಕೆ (ಇ.ಡಿ) ಅನುಮತಿ ನೀಡಿದೆ.
ನೀರವ್ ಬಳಿ3 ಪಾಸ್‌ಪೋರ್ಟ್
ನೀರವ್ ಮೋದಿ ಮೂರು ಪಾಸ್ ಪೋರ್ಟ್‌ಗಳನ್ನು ಹೊಂದಿರುವುದು ಬಯಲಾಗಿದೆ.
ಪಾಸ್‌ಪೋರ್ಟ್‌ಗಳ ಜತೆ ಹಲವು ನಿವಾಸಿ ಕಾರ್ಡ್‌ಗಳೂ ಸಿಕ್ಕಿವೆ. ಅವುಗಳಲ್ಲಿ ಕೆಲವು ಅವಧಿ ಮುಗಿದಿವೆ. ಯುಎಇ, ಸಿಂಗಪುರ ಮತ್ತು ಹಾಂಕಾಂಗ್‌ನಲ್ಲಿ ವಾಸಿಸಲು ಅನುಮತಿ ಪಡೆದಿದ್ದ ಕಾರ್ಡ್‌ಗಳು ಇವಾಗಿವೆ.
ಬಂಧಿಸಲಾಗಿರುವ ನೀರವ್ ಅವರನ್ನು ವಾಂಡ್ಸ್‌ವರ್ಥ್‌ನ ಕಾರಾಗೃಹದಲ್ಲಿ ಇರಿಸಲಾಗುವುದು ಎನ್ನಲಾಗುತ್ತಿದೆ. ಈ ಕಾರಾಗೃಹ ಪಶ್ಚಿಮ ಯುರೋಪ್‌ನಲ್ಲಿ ಅತಿದೊಡ್ಡದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.