ADVERTISEMENT

ನೀರವ್‌ ಮೋದಿ ಬಂಗ್ಲೆ ನೆಲಸಮ

ಪಿಟಿಐ
Published 8 ಮಾರ್ಚ್ 2019, 16:43 IST
Last Updated 8 ಮಾರ್ಚ್ 2019, 16:43 IST
ನೀರವ್‌ ಮೋದಿ
ನೀರವ್‌ ಮೋದಿ   

ಮುಂಬೈ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್‌ ಮೋದಿಗೆ ಸೇರಿದ 30 ಸಾವಿರ ಅಡಿ ವಿಸ್ತೀರ್ಣದ ‘ರೂಪಾನ್ಯ ಬಂಗ್ಲೆ’ಯನ್ನು ಶುಕ್ರವಾರ ಸ್ಫೋಟಗಳನ್ನು ಬಳಸಿ ನೆಲಸಮ ಮಾಡಲಾಗಿದೆ.

‘ಇಲ್ಲಿನ ಕಿಹಿಮ್‌ ಬೀಚ್‌ನಲ್ಲಿದ್ದ ಬಂಗ್ಲೆಯನ್ನು ಸ್ಫೋಟಕ ಬಳಸಿ ನಾಶಪಡಿಸಲಾಯಿತು, ಈ ವೇಳೆ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ದೂಳು ಆವರಿಸಿಕೊಂಡಿತು ’ ಎಂದು ರಾಯಘಡದ ಜಿಲ್ಲಾಧಿಕಾರಿ ವಿಜಯ್‌ ಸೂರ್ಯವಂಶಿ ಅವರು ತಿಳಿಸಿದರು.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ನೀರವ್‌ ಮೋದಿ ₹13 ಸಾವಿರ ಕೋಟಿ ಸಾಲ ಪಡೆದು ವಂಚಿಸಿ ಪರಾರಿಯಾಗಿದ್ದರು. ಇದಾದ ಬಳಿಕ ಅವರಿಗೆ ಸೇರಿದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿತ್ತು.‘ರೂಪಾನ್ಯ ಬಂಗ್ಲೆ’ ಆಸ್ತಿಯು ₹40 ಕೋಟಿ ಮೌಲ್ಯ ಹೊಂದಿದೆ.

ADVERTISEMENT

‘ಬಂಗ್ಲೆ ಧ್ವಂಸಕ್ಕೂ ಮುನ್ನ ಅದರೊಳಗಿದ್ದ ₹10 ಲಕ್ಷ ಮೌಲ್ಯದ ಬುದ್ಧನ ಪ್ರತಿಮೆ, ₹15 ಲಕ್ಷ ಮೌಲ್ಯದ ಸ್ನಾನದ ತೊಟ್ಟಿ ಹಾಗೂ ₹20 ಲಕ್ಷ ಮೌಲ್ಯದ ಗೊಂಚಲುದೀಪ ಪ್ರತ್ಯೇಕವಾಗಿ ತೆಗೆದಿಟ್ಟು, ಹರಾಜಿಗೆ ಇಡಲು ತೀರ್ಮಾನಿಸಲಾಗಿದೆ. ಈ ವಸ್ತುಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಒಪ್ಪಿಸಲಾಗಿದೆ ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಕರಾವಳಿ ನಿಯಂತ್ರಣ ನಿಯಾಮವಳಿಗಳನ್ನು ಉಲ್ಲಂಘಿಸಿ ನೀರವ್‌ ಮೋದಿ ಅವರು ಈ ಬಂಗ್ಲೆ ಕಟ್ಟಿಸಿದ್ದರು. ಈ ಕಾರಣಕ್ಕಾಗಿ ಅದನ್ನು ಧ್ವಂಸಗೊಳಿಸಲು ಅನುಮತಿ ನೀಡಬೇಕು ಎಂದು ಕೋರಿ ಮಹಾರಾಷ್ಟ್ರ ಸರ್ಕಾರವು ಕಳೆದ ವರ್ಷವೇ ಇ.ಡಿ.ಗೆ ಪತ್ರ ಬರೆದಿತ್ತು.

ಕಳೆದ ಜನವರಿ 25ರಂದು ಬುಲ್ಡೋಜರ್‌ ಮೂಲಕ ಬಂಗ್ಲೆಯನ್ನು ನೆಲಸಮ ಮಾಡುವ ಕಾರ್ಯವನ್ನು ಅಧಿಕಾರಿಗಳು ಕೈಗೆತ್ತಿಕೊಂಡಿದ್ದರು. ಆರ್‌ಸಿಸಿಯಿಂದ ನಿರ್ಮಿಸಿದ್ದ ಕಾರಣ, ಸುಲಭವಾಗಿ ಕೆಡವಲು ಸಾಧ್ಯವಾಗಿರಲಿಲ್ಲ. ಇದಾದ ಬಳಿಕ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ತಾಂತ್ರಿಕ ವಿವಿಯ ತಜ್ಞರ ತಂಡವು ಸ್ಥಳ ಪರಿಶೀಲನೆ ನಡೆಸಿ, ಸ್ಫೋಟಕ ಬಳಸಿ ಕಟ್ಟಡ ಉರುಳಿಸುವಂತೆ ಸಲಹೆ ನೀಡಿತ್ತು.

ತಾಂತ್ರಿಕ ತಂಡ ನೀಡಿದ ಸಲಹೆ ಆಧಾರದಲ್ಲಿ ಶುಕ್ರವಾರ ಕಟ್ಟಡ ಸ್ಫೋಟಿಸಲಾಗಿದೆ. ಮಹಾರಾಷ್ಟ್ರದ ಕರಾವಳಿ ನಿಯಂತ್ರಣ ವಲಯದಲ್ಲಿ ನಿಯಮ ಉಲ್ಲಂಘಿಸಿದ್ದ ಕಾರಣಕ್ಕಾಗಿ ಅಲಿಭಾಗ್‌ ಪ್ರದೇಶದಲ್ಲಿದ್ದ ನೀರವ್‌ ಮೋದಿಗೆ ಸೇರಿದ್ದ ಇದೇ ರೀತಿಯ ಮೂರು ಬಂಗ್ಲೆಯನ್ನು ಈಗಾಗಲೇ ನೆಲಸಮಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.