ADVERTISEMENT

ನಿರ್ಭಯಾ ಪ್ರಕರಣ: ವಿನಯ್ ಅರ್ಜಿ ವಜಾ

ಮಾನಸಿಕ ಅಸ್ವಸ್ಥತೆ ಕಟ್ಟುಕಥೆ: ಜೈಲಿನ ಅಧಿಕಾರಿಗಳ ಸ್ಪಷ್ಟನೆ

ಪಿಟಿಐ
Published 22 ಫೆಬ್ರುವರಿ 2020, 23:12 IST
Last Updated 22 ಫೆಬ್ರುವರಿ 2020, 23:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

‘ನಾನು ಮಾನಸಿಕ ಸ್ತಿಮಿತ ಕಳೆದುಕೊಂಡಿದ್ದು, ನನಗೆ ಚಿಕಿತ್ಸೆ ಕೊಡಿಸಬೇಕು’ ಎಂದು ಶರ್ಮಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಕುರಿತು ವಿಚಾರಣೆ ನಡೆಸಿದ ಹೆಚ್ಚುವರಿ ಸೆಷೆನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ವಿನಯ್ ಕುಮಾರ್ ಶರ್ಮಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬುದು ಕೇವಲ ‘ವಿಕೃತ ಸಂಗತಿಗಳ ಕಟ್ಟು ಕಥೆ’ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಶನಿವಾರ ಕೋರ್ಟ್‌ಗೆ ತಿಳಿಸಿದ್ದಾರೆ.

ADVERTISEMENT

ಈ ಕುರಿತು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿರುವ ಜೈಲಿನ ಅಧಿಕಾರಿಗಳು, ‘ ಶರ್ಮಾ ತನ್ನ ದೇಹದ ಮೇಲೆ ಮೇಲ್ನೋಟಕ್ಕೆ ಕಾಣಿಸುವಂತೆ ಗಾಯಗಳನ್ನು ಮಾಡಿಕೊಂಡಿದ್ದಾನೆ. ಆದರೆ, ಅವನು ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂಬುದನ್ನು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸ್ಪಷ್ಟಪಡಿಸಿವೆ’ ಎಂದು ವಿವರಿಸಿದ್ದಾರೆ.

‘ಅಪರಾಧಿಯು ವಿಕೃತ ಸಂಗತಿಗಳ ಕಟ್ಟುಕಥೆಯನ್ನು ಹೆಣೆದಿದ್ದಾನೆ. ವೈದ್ಯರು ಆತನ ತಪಾಸಣೆ ನಡೆಸಿದ್ದು, ಆತನ ಕೈ ಮೇಲೆ ಗಾಯವಿರುವುದನ್ನು ಗುರುತಿಸಿ, ಚಿಕಿತ್ಸೆ ನೀಡಿದ್ದಾರೆ. ಆತನ ಮೈಮೇಲಿರುವ ಗಾಯಗಳೆಲ್ಲವನ್ನೂ ಆತನೇ ಮಾಡಿಕೊಂಡಿದ್ದಾನೆ’ ಎಂದು ಜೈಲಿನ ಅಧಿಕಾರಿಗಳನ್ನು ಪ್ರತಿನಿಧಿಸುವ ಸರ್ಕಾರಿ ವಕೀಲರು ಹೇಳಿದ್ದಾರೆ.

‘ಶರ್ಮಾ ತನ್ನ ತಾಯಿ ಮತ್ತು ವಕೀಲರ ಜತೆ ಮಾತನಾಡುತ್ತಿದ್ದಾನೆ. ಹಾಗಾಗಿ, ಅವನಿಗೆ ಯಾರನ್ನೂ ಗುರುತಿಸಲು ಸಾಧ್ಯವಾಗದು ಎಂಬುದನ್ನು ಒಪ್ಪಲಾಗದು’ ಎಂದೂ ಅವರು ಹೇಳಿದ್ದಾರೆ.

‘ವೈದ್ಯಕೀಯ ವರದಿಗಳ ಪ್ರಕಾರ ಶರ್ಮಾ ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ. ಆತನನ್ನು ಯಾವುದೇ ಆಸ್ಪತ್ರೆಯಲ್ಲೂ ಪರೀಕ್ಷಿಸುವ ಅಗತ್ಯವಿಲ್ಲ. ನಿತ್ಯವೂ ಜೈಲಿನಲ್ಲಿ ಶರ್ಮಾ ಹಾಗೂ ಆತನ ಇತರ ಸಹಚರರನ್ನು ತಪಾಸಣೆ ಮಾಡಲಾಗುತ್ತಿದೆ. ನಾಲ್ವರೂ ಆರೋಗ್ಯವಾಗಿದ್ದಾರೆ’ ಎಂದು ಅಪರಾಧಿಗಳನ್ನು ತಪಾಸಣೆ ನಡೆಸಿದ ವೈದ್ಯರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.