ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇದೇ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲಹೌಸ್ ನ್ಯಾಯಾಲಯ ಇತ್ತೀಚೆಗೆ ವಾರಂಟ್ ಜಾರಿ ಮಾಡಿತ್ತು. ಅಪರಾಧಿಗಳ ಪೈಕಿ ಇಬ್ಬರಾದವಿನಯ್ ಕುಮಾರ್ ಶರ್ಮಾ ಮತ್ತು ಮುಕೇಶ್ ಸಿಂಗ್ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಹೀಗಾಗಿ ಗಲ್ಲು ಶಿಕ್ಷೆ ಖಾತ್ರಿಯಾಗಿದೆ. ಗಲ್ಲು ಶಿಕ್ಷೆ ಜಾರಿಗೊಳಿಸುವುದಕ್ಕೂ ಮುನ್ನ ಜೈಲು ಅಧೀಕ್ಷಕರು ಏನೇನು ಪ್ರಕ್ರಿಯೆ ಅನುಸರಿಸುತ್ತಾರೆ? ಇಲ್ಲಿದೆ ಮಾಹಿತಿ:
* ಅಪರಾಧಿಯನ್ನು ನಸುಕಿನಲ್ಲೇ ಎಬ್ಬಿಸಿ ಸಿದ್ಧನಾಗುವಂತೆ ಸೂಚಿಸಲಾಗುತ್ತದೆ.
* ಸ್ನಾನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಸ್ನಾನಕ್ಕೆ ಬಿಸಿನೀರು ಮತ್ತು ಮತ್ತು ತಣ್ಣೀರಿನ ಸೌಲಭ್ಯ ಒದಗಿಸಲಾಗುತ್ತದೆ.
* ಕೊನೆಯದಾಗಿ ಅಪರಾಧಿ ಬಯಸುವ, ಆತನ ಇಷ್ಟದ ಆಹಾರ/ತಿಂಡಿ ನೀಡಲಾಗುತ್ತದೆ.
* ಉಪಾಹಾರದ ಬಳಿಕ ತುಸು ಸಮಯ ಏಕಾಂಗಿಯಾಗಿ ಕಳೆಯಲು ಬಿಡಲಾಗುತ್ತದೆ.
* ಅಪರಾಧಿಯು ಬಯಸಿದಲ್ಲಿ ಆತನಿಚ್ಛೆಯ ಧಾರ್ಮಿಕ ಪುಸ್ತಕಗಳನ್ನು ನೀಡಲಾಗುತ್ತದೆ. ಬಳಿಕ ಅದನ್ನು ಓದಲು ಸ್ವಲ್ಪ ಸಮಯ ನೀಡಲಾಗುತ್ತದೆ. ಪ್ರಾರ್ಥನೆ ಮಾಡಲು ಬಯಸಿದಲ್ಲಿ ಅದಕ್ಕೂ ಅವಕಾಶ ನೀಡಲಾಗುತ್ತದೆ. ಬದುಕಿನ ಕೊನೆಯ ಕ್ಷಣಗಳಲ್ಲಿ ಆತನಿಗೆ ಮಾನಸಿಕ ಶಾಂತಿ ದೊರೆಯಲಿ ಎನ್ನುವ ಉದ್ದೇಶದಿಂದ ಈ ಅವಕಾಶ ನೀಡಲಾಗುತ್ತದೆ.
* ಅಪರಾಧಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಅಪರಾಧಿಯು ಸಂಪೂರ್ಣವಾಗಿ ಆರೋಗ್ಯದಿಂದ ಕೂಡಿದ್ದಾನೆ ಎಂಬುದು ದೃಢಪಟ್ಟ ಬಳಿಕ ಗಲ್ಲು ಜಾರಿ ಪ್ರಕ್ರಿಯೆ ಮುಂದುವರಿಸಲಾಗುತ್ತದೆ
* ಕಾರ್ಯನಿರ್ವಾಹಕ ದಂಡಾಧಿಕಾರಿ ಅಪರಾಧಿಯನ್ನು ಗುರುತಿಸಬೇಕಾಗುತ್ತದೆ
* ಅಪರಾಧಿಯ ಕೈಗಳನ್ನು ಹಿಂದಕ್ಕೆ ಕಟ್ಟಿ ಮುಖವನ್ನು ಹತ್ತಿಯ ಬಟ್ಟೆ ಅಥವಾ ಮಾಸ್ಕ್‌ನಿಂದ ಮುಚ್ಚಲಾಗುತ್ತದೆ
* ಮರಣದಂಡನೆಯ ವಾರಂಟ್ ಪ್ರತಿಯನ್ನು ಅಪರಾಧಿಯ ಮಾತೃಭಾಷೆಯಲ್ಲಿ ಓದಿ ಹೇಳಲಾಗುತ್ತದೆ
* ಶಿಕ್ಷೆ ಜಾರಿಗೊಳಿಸುವಂತೆ ಗಲ್ಲಿಗೇರಿಸುವ ವ್ಯಕ್ತಿಗೆ (ಹ್ಯಾಂಗ್‌ಮನ್) ಮ್ಯಾಜಿಸ್ಟ್ರೇಟರು ಸೂಚನೆ ನೀಡುತ್ತಾರೆ
*ಗಲ್ಲಿಗೇರಿಸುವ ವ್ಯಕ್ತಿಯ ವಿವರವನ್ನು ಗೋಪ್ಯವಾಗಿರಿಸಲಾಗುತ್ತದೆ. ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಆತನಿಗೆ ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕೆ ಮಾಹಿತಿ ಗೋಪ್ಯವಾಗಿಡಲಾಗುತ್ತದೆ.
2000ನೇ ಇಸವಿ ಬಳಿಕಭಾರತದಲ್ಲಿ ಗಲ್ಲಿಗೇರಿದವರು
ಹೆಸರು – ಆರೋಪ – ದಿನಾಂಕ
* ಧನಂಜಯ ಚ್ಯಾಟರ್ಜಿ – ಅತ್ಯಾಚಾರ, ಕೊಲೆ – 2004ರ ಆಗಸ್ಟ್ 14
* ಅಜ್ಮಲ್ ಕಸಬ್ – 2008ರ ಮುಂಬೈ ದಾಳಿಯ ಅಪರಾಧಿ – 2012ರ ನವೆಂಬರ್ 21
* ಅಫ್ಜಲ್ ಗುರು – 2001ರ ಸಂಸತ್ ದಾಳಿಯ ಅಪರಾಧಿ – 2013ರ ಫೆಬ್ರುವರಿ 9
* ಯಾಕುಬ್ ಮೆಮೊನ್ – 1993ರ ಮುಂಬೈ ಸ್ಫೋಟದ ಅಪರಾಧಿ – 2015ರ ಜುಲೈ 30
ಗಲ್ಲುಶಿಕ್ಷೆಯಿಂದ ವಿನಾಯಿತಿ ಸಿಗೋದುಯಾರಿಗೆ?
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪರಾಧಿಗಳಿಗೆ, ಗರ್ಭಿಣಿಯರಿಗೆ ಮತ್ತು ಮಾನಸಿಕ ಅಸ್ವಸ್ಥ ಅಪರಾಧಿಗಳಿಗೆ ಮರಣದಂಡನೆಯಿಂದ ವಿನಾಯಿತಿ ನೀಡಬಹುದಾಗಿದೆ. ಉದಾಹರಣೆಗೆ:ನಿರ್ಭಯಾ ಪ್ರಕರಣದಲ್ಲಿ ಒಬ್ಬ ಅಪರಾಧಿಯು ಕೃತ್ಯ ಎಸಗಿದ ವೇಳೆ ಅಪ್ರಾಪ್ತನಾಗಿದ್ದ. ಆತನಿಗೆ ಜೈಲು ಶಿಕ್ಷೆ ಮಾತ್ರ ವಿಧಿಸಲಾಗಿತ್ತು. ಆತ ಶಿಕ್ಷೆ ಅನುಭವಿಸಿ ನಂತರ ಬಿಡುಗಡೆಯಾಗಿದ್ದಾನೆ.
ನಿರ್ಭಯಾ ಪ್ರಕರಣದ ಸಂಕ್ಷಿಪ್ತ ಹಿನ್ನೆಲೆ
ದೆಹಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿ 23 ವರ್ಷದ ನಿರ್ಭಯಾ ಮೇಲೆ 2012ರ ಡಿಸೆಂಬರ್ 16ರ ರಾತ್ರಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆ ನಡೆದಿತ್ತು. ಚಲಿಸುತ್ತಿದ್ದ ಬಸ್‌ನಲ್ಲಿ ಆರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದರು. ನಿರ್ಭಯಾ ಮತ್ತು ಅವರ ಜತೆಗಿದ್ದ ಗೆಳೆಯನನ್ನು ಬೆತ್ತಲಾಗಿಸಿ ರಸ್ತೆಗೆ ಎಸೆದಿದ್ದರು. ನಿರ್ಭಯಾ ಅವರು ಡಿ. 29ರಂದು ಸಿಂಗಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು.ಈ ಘಟನೆಯು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಅತ್ಯಾಚಾರಕ್ಕೆ ಮರಣದಂಡನೆ ಗರಿಷ್ಠ ಶಿಕ್ಷೆ ಎಂದುಅಪರಾಧ ಕಾನೂನಿಗೆ 2013ರಲ್ಲಿ ತಿದ್ದುಪಡಿ ತರುವುದಕ್ಕೂ ಇದು ಕಾರಣವಾಗಿತ್ತು.
ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಅಪರಾಧಿಗಳನ್ನಾಗಿ ತೀರ್ಪು ನೀಡಲಾಗಿತ್ತು. ಇವರಲ್ಲೊಬ್ಬ ಅಪ್ರಾಪ್ತ ಜೈಲು ಶಿಕ್ಷೆಯನ್ನು ಅನುಭವಿಸಿ ನಂತರ ಬಿಡುಗಡೆಯಾಗಿದ್ದರೆ, ಮತ್ತೊಬ್ಬ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ. ಉಳಿದ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು.
ಭಾರತದಲ್ಲಿ ಮರಣದಂಡನೆ ಜಾರಿಗೆ ಇದೆ ಎರಡು ವಿಧಾನ!
ಭಾರತದಲ್ಲಿ ಎರಡು ಸ್ವರೂಪದಲ್ಲಿ ಮರಣದಂಡನೆ ಜಾರಿಗೆ ತರಲು ಅವಕಾಶವಿದೆ. ಒಂದು ಗಲ್ಲು, ಎರಡನೆಯದ್ದು ಗುಂಡು ಹೊಡೆಯುವ ಮೂಲಕ ಕೊಲ್ಲುವುದು. ಬಹುತೇಕ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯನ್ನೇ ಘೋಷಿಸಲಾಗುತ್ತದೆ. ಅಪರಾಧಿಗಳಗೆ ಗುಂಡು ಹೊಡೆದು ಕೊಲ್ಲುವ ಅವಕಾಶವನ್ನು ‘1950 ಭಾರತೀಯ ಸೇನಾ ಕಾಯ್ದೆ’ ಕೊಟ್ಟಿದೆ. ಸೇನೆಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಮಾತ್ರ ಈ ಸ್ವರೂಪದ ಶಿಕ್ಷೆಗೆ ಅವಕಾಶವಿದೆ. ಆದರೆ, ಈ ಸ್ವರೂಪದಲ್ಲಿ ಶಿಕ್ಷೆ ಜಾರಿಗೊಳಿಸಿದ್ದರ ಬಗ್ಗೆ ಈವರೆಗೆ ಮಾಹಿತಿ ಲಭ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.