ADVERTISEMENT

ಭಾರತದ ಆರ್ಥಿಕತೆಯು ಹಲವು ದೇಶಗಳಿಗಿಂತ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 16:14 IST
Last Updated 1 ಆಗಸ್ಟ್ 2022, 16:14 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ಭಾರತದ ಆರ್ಥಿಕತೆಯು ಹಲವು ದೇಶಗಳಿಗಿಂತ ಉತ್ತಮವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೋಮವಾರ ಪ್ರತಿಪಾದಿಸಿದ್ದಾರೆ.

ಬೆಲೆ ಏರಿಕೆ ವಿಚಾರವಾಗಿ ಸಂಸತ್‌ನಲ್ಲಿ ಮಾತನಾಡಿರುವ ಅವರು, ‘ಜಾಗತಿಕ ಏಜೆನ್ಸಿಗಳು ಭಾರತದ ಆರ್ಥಿಕತೆಯನ್ನು ಉನ್ನತ ಸ್ಥಾನದಲ್ಲಿ ನೋಡುತ್ತಿವೆ. ಭಾರತವು ಇನ್ನೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ’ ಎಂದು ಹೇಳಿದ್ದಾರೆ.

‘ಕೋವಿಡ್‌ ರೀತಿಯ ಸಾಂಕ್ರಾಮಿಕ ರೋಗವನ್ನು ನಾವು ಈ ಹಿಂದೆ ನೋಡಿರಲಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನರಿಗೆ ಹೆಚ್ಚುವರಿ ಸಹಾಯವನ್ನು ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾತ್ರವನ್ನು ನಿರ್ವಹಿಸಿವೆ’ ಎಂದು ಸೀತಾರಾಮನ್‌ ತಿಳಿಸಿದ್ದಾರೆ.

ADVERTISEMENT

‘ಇಂದು ಬೆಳಿಗ್ಗೆ ನಾವು ಜುಲೈ ತಿಂಗಳಿನ ಜಿಎಸ್‌ಟಿ ಸಂಗ್ರಹವನ್ನು ಘೋಷಿಸಿದ್ದೇವೆ. ಜುಲೈ 2022 ರಲ್ಲಿ, ₹1.49 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಸತತ ಐದನೇ ತಿಂಗಳು ₹1.4 ಲಕ್ಷ ಕೋಟಿಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ’ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

'ಸಾಂಕ್ರಾಮಿಕ, ಎರಡನೇ ಅಲೆ, ಓಮೈಕ್ರಾನ್, ರಷ್ಯಾ-ಉಕ್ರೇನ್ ಯುದ್ಧಗಳಿಂದ ಜಗತ್ತು ನಲುಗಿದೆ. ಇಂದಿಗೂ ಸಹ ಚೀನಾದಲ್ಲಿ ಅತಿದೊಡ್ಡ ಪೂರೈಕೆ ಘಟಕಗಳು ಲಾಕ್‌ಡೌನ್‌ನಲ್ಲಿವೆ. ಇದರ ಹೊರತಾಗಿಯೂ, ನಮ್ಮ ಹಣದುಬ್ಬರ ದರವು ಶೇ 7 ಅಥವಾ ಅದಕ್ಕಿಂತ ಕಡಿಮೆ ಇರುವುದನ್ನು ಗಮನಿಸಬೇಕು’ ಎಂದು ಅವರು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರ ಪ್ರತಿಕ್ರಿಯೆಯಿಂದ ತೃಪ್ತರಾಗದ ಕಾಂಗ್ರೆಸ್‌ ಸಂಸದರು ಕಲಾಪದಿಂದ ಹೊರನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.