ADVERTISEMENT

ನಿಠಾರಿ ಹತ್ಯೆ ಪ್ರಕರಣ: 13ನೇ ಪ್ರಕರಣದಲ್ಲೂ ಕೋಲಿ ಖುಲಾಸೆ; ಬಿಡುಗಡೆಗೆ ಆದೇಶ

ಪಿಟಿಐ
Published 11 ನವೆಂಬರ್ 2025, 14:10 IST
Last Updated 11 ನವೆಂಬರ್ 2025, 14:10 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಭಾರಿ ಸುದ್ದಿಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ 2006ರ ನಿಠಾರಿ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಏಕೈಕ ಅಪರಾಧಿ ಸುರೇಂದ್ ಕೋಲಿ ಅವರನ್ನು 13ನೇ ಪ್ರಕರಣದಲ್ಲಿಯೂ ಖುಲಾಸೆಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಬೇರೆ ಯಾವುದೇ ಪ್ರಕರಣದಲ್ಲಿ ಅವರ ವಿಚಾರಣೆ ಅಗತ್ಯವಿಲ್ಲ ಎಂದಾದರೆ ಕೂಡಲೇ ಬಿಡುಗಡೆಗೆ ಆದೇಶಿಸಿದೆ.

ನಿಠಾರಿ ಹತ್ಯೆ ಪ್ರಕರಣದಲ್ಲಿ ಒಟ್ಟು 13 ಮೊಕದ್ದಮೆ ದಾಖಲಾಗಿದ್ದವು. 12 ಪ್ರಕರಣಗಳಲ್ಲಿ ಕೋಲಿ ಖುಲಾಸೆಗೊಂಡಿದ್ದರು. ಇದೀಗ, 13ನೇ ಪ್ರಕರಣದಲ್ಲು ಖುಲಾಸೆಗೊಂಡಿರುವುದರಿಂದ ಬಿಡುಗಡೆಗೆ ಆದೇಶಿಸಲಾಗಿದೆ.

‘ನಿಠಾರಿ ಸರಣಿ ಹತ್ಯೆ’ ಪ್ರಕರಣದ ಆರೋಪಿ ಸುರೇಂದ್ರ ಕೋಲಿ ಅವರ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಪುರಸ್ಕರಿಸಿದ್ದು, ‘ಬೇರೆ ಯಾವುದೇ ಪ್ರಕರಣ ಅಥವಾ ವಿಚಾರಣೆಯ ಅಗತ್ಯವಿಲ್ಲದಿದ್ದರೆ ಅರ್ಜಿದಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಆದೇಶ ನೀಡಿದೆ.

ADVERTISEMENT

2006ರ ಡಿ.29ರಂದು ನೋಯ್ಡಾದ ನಿಠಾರಿಯಲ್ಲಿರುವ ಉದ್ಯಮಿ ಮೋನಿಂದರ್‌ ಸಿಂಗ್‌ ಪಂಢೇರ್‌ ಅವರ ಮನೆಯ ಹಿಂಭಾಗದ ಚರಂಡಿಯಲ್ಲಿ ಎಂಟು ಮಕ್ಕಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದ ನಂತರ ‘ನಿಠಾರಿ ಸರಣಿ ಹತ್ಯೆ’ಗಳು ಬೆಳಕಿಗೆ ಬಂದಿದ್ದವು. ಆ ಸಮಯದಲ್ಲಿ ಮೋನಿಂದರ್ ಅವರ ಮನೆಯಲ್ಲಿ ಕೋಲಿ ಮನೆಗೆಲಸ ಮಾಡುತ್ತಿದ್ದರು.

ಕೋಲಿ ಅವರ ಅರ್ಜಿ ಕುರಿತು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ವಿಕ್ರಮ್‌ನಾಥ್‌ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಕೋಲಿ ಅವರನ್ನು ಸುಪ್ರೀಂ ಕೋರ್ಟ್‌ ಖುಲಾಸೆಗೊಳಿಸಿದ್ದು, ಅವರಿಗೆ ವಿಧಿಸಲಾದ ಶಿಕ್ಷೆ ಮತ್ತು ದಂಡವನ್ನು ರದ್ದುಗೊಳಿಸಿದೆ.

ನೋಯ್ಡಾದ ನಿಠಾರಿ ಗ್ರಾಮದಲ್ಲಿ 15 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೋಲಿ ಶಿಕ್ಷೆಗೊಳಗಾಗಿದ್ದರು. ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ 2011ರ ಫೆಬ್ರುವರಿಯಲ್ಲಿ ಎತ್ತಿಹಿಡಿದಿತ್ತು. ಅವರ ಪರಿಶೀಲನಾ ಅರ್ಜಿಯನ್ನು 2014ರಲ್ಲಿ ವಜಾಗೊಳಿಸಿತ್ತು. 2015ರ ಜನವರಿಯಲ್ಲಿ ಅಲಹಾಬಾದ್‌ ಹೈಕೋರ್ಟ್ ಕೋಲಿ ಅವರ ಕ್ಷಮಾದಾನ ಅರ್ಜಿಯ ವಿಲೇವಾರಿಯು ಅತಿ ವಿಳಂಬವಾದದ್ದರಿಂದ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

2023ರ ಅಕ್ಟೋಬರ್‌ನಲ್ಲಿ ಅಲಹಾಬಾದ್‌ ಹೈಕೋರ್ಟ್‌, ಕೋಲಿ ಮತ್ತು ಸಹ ಆರೋಪಿ ಪಂಧೇರ್‌ ಅವರನ್ನು ನಿಠಾರಿಗೆ ಸಂಬಂಧಿಸಿದ ಇತರ ಪ್ರಕರಣಗಳಲ್ಲಿ ಖುಲಾಸೆಗೊಳಿಸಿತ್ತು. 2017ರಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ್ದ ಮರಣದಂಡನೆಯನ್ನು ರದ್ದುಗೊಳಿಸಿತ್ತು. ನ್ಯಾಯಾಲಯವು 12 ಪ್ರಕರಣಗಳಲ್ಲಿ ಕೋಲಿ ಮತ್ತು ಎರಡು ಪ್ರಕರಣಗಳಲ್ಲಿ ಪಂಢೇರ್‌ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಮತ್ತು ಸಂತ್ರಸ್ತ ಕುಟುಂಬಗಳು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಈ ವರ್ಷ ಜುಲೈ 30ರಂದು ಎಲ್ಲ 14 ಮೇಲ್ಮನವಿಗಳನ್ನು ವಜಾಗೊಳಿಸಿತ್ತು. ಅ.7ರಂದು ಕೋಲಿ ಅವರ ಪರಿಹಾರಾತ್ಮಕ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿತ್ತು. ಅವರ ಮನವಿಯನ್ನು ‘ಅನುಮತಿಸಲು ಅರ್ಹವಾಗಿದೆ’ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.