
ನವದೆಹಲಿ: ಪ್ರಧಾನ ಮಂತ್ರಿ ಕಾರ್ಯಾಲಯದ ಚಾಲಕನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ನೀತಿ ಆಯೋಗದ ಕಚೇರಿ ಆವರಣ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಕೂಡಲೇ ತಡೆದು ನಿಲ್ಲಿಸಿದ್ದಾರೆ.
ವ್ಯಕ್ತಿಯನ್ನು ಸಂಜೀವ್ ಕುಮಾರ್ ಎಂದು ಗುರುತಿಸಲಾಗಿದ್ದು, ನೀರು ಬೇಕೆಂದು ನೀತಿ ಆಯೋಗದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ್ದ. ಗಣರಾಜ್ಯೋತ್ಸವದ ಭದ್ರತೆ ಹಿನ್ನೆಲೆ ಆತನನ್ನು ಗುರುತಿನ ಚೀಟಿ ತೋರಿಸುವಂತೆ ಪ್ರಶ್ನಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಸಂದರ್ಭ ವ್ಯಕ್ತಿ ಮತ್ತು ಭದ್ರತಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ ನಡೆದಿದೆ. ಬಳಿಕ, ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸದ ಮಾರ್ಗ್‌ನಲ್ಲಿರುವ ನೀತಿ ಆಯೋಗದ ಕಚೇರಿಯು ಗಣರಾಜ್ಯೋತ್ಸವದಂದು ಪರೇಡ್ ನಡೆಯುವ ಕರ್ತವ್ಯ ಪಥದ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಪೊಲೀಸ್ ಮತ್ತು ಪ್ಯಾರಾ ಮಿಲಿಟರಿ ಪಡೆಗಳನ್ನು ಒಳಗೊಂಡ ಭದ್ರತೆ ಏರ್ಪಡಿಸಲಾಗಿದೆ.
‘ಪ್ರಮಾಣಿತ ಭದ್ರತಾ ಶಿಷ್ಟಾಚಾರಗಳನ್ನು ಅನುಸರಿಸಲಾಯಿತು. ಆ ಸಮಯದಲ್ಲಿ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿ ತೃಪ್ತಿಕರ ವಿವರಣೆ ನೀಡದ ಕಾರಣ ಆತನನ್ನು ತಡೆದು ನಿಲ್ಲಿಸಲಾಯಿತು. ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಯೊತು’ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ವಿಚಾರಣೆ ಮತ್ತು ಪರಿಶೀಲನೆಯ ನಂತರ, ಕುಮಾರ್ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.