ADVERTISEMENT

ದೇಶದಲ್ಲಿ ಕಾಂಗ್ರೆಸ್‌ ಪ್ರಬಲವಾಗಲೆಂಬುದು ನನ್ನ ಹೃದಯಪೂರ್ವಕ ಆಶಯ: ನಿತಿನ್ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 4:29 IST
Last Updated 29 ಮಾರ್ಚ್ 2022, 4:29 IST
ಕೇಂದ್ರ ಸಚಿವ ನಿತಿನ್‌ ಗಡ್ಕರಿ
ಕೇಂದ್ರ ಸಚಿವ ನಿತಿನ್‌ ಗಡ್ಕರಿ   

ಪುಣೆ: ‘ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರಬಲ ವಿರೋಧಪಕ್ಷ ಅಗತ್ಯ. ಕಾಂಗ್ರೆಸ್‌ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಆ ನಿಟ್ಟಿನಲ್ಲಿ ಪ್ರಬಲವಾಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ’ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದರು.

₹ 2,344 ಕೋಟಿ ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಎಂಬುದು ಎರಡು ಚಕ್ರಗಳ ಮೇಲೆ ಸಾಗಲಿದೆ. ಒಂದು ಆಡಳಿತ ಪಕ್ಷ, ಮತ್ತೊಂದು ವಿರೋಧಪಕ್ಷ. ಇದೇ ಕಾರಣದಿಂದ ಕಾಂಗ್ರೆಸ್‌ ಬಲಗೊಳ್ಳಬೇಕು ಎಂಬುದು ನನ್ನ ಅಪೇಕ್ಷೆ’ ಎಂದರು.

ಕಾಂಗ್ರೆಸ್‌ ದುರ್ಬಲಗೊಂಡಂತೆ ಆ ಸ್ಥಳವನ್ನು ಪ್ರಾದೇಶಿಕ ಪಕ್ಷಗಳು ಆವರಿಸಿಕೊಳ್ಳುತ್ತಿವೆ. ಈ ಬೆಳವಣಿಗೆಯು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ಮೋದಿ ಜೊತೆ ಚರ್ಚಿಸಿ– ಕಾಂಗ್ರೆಸ್: ಗಡ್ಕರಿ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಸಚಿನ್ ಸಾವಂತ್‌ ಸ್ವಾಗತಿಸಿದ್ದಾರೆ. ‘ಬಿಜೆಪಿ ವಿರೋಧಪಕ್ಷಗಳನ್ನು ನಾಶಪಡಿಸಲಿದೆ ಎಂದು ಪ್ರತಿಪಾದಿಸುವ ಪ್ರಧಾನಿ ಜೊತೆಗೂ ಚರ್ಚಿಸಿ’ ಎಂದಿದ್ದಾರೆ.

‘ಬಿಜೆಪಿಯೇತರ ಸರ್ಕಾರ ಅಸ್ತಿತ್ವದಲ್ಲಿರುವ ರಾಜ್ಯಗಳಲ್ಲಿ ಕಿರುಕುಳ ನೀಡಲು ಕೇಂದ್ರದ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಎಂಟು ವರ್ಷದಿಂದ ದೇಶದಲ್ಲಿ ಅನಪೇಕ್ಷಿತ ರಾಜಕಾರಣ ನಡೆಯುತ್ತಿದೆ. ಪ್ರಜಾಪ್ರಭುತ್ವ ಸ್ಥಾನದಲ್ಲಿ ಸರ್ವಾಧಿಕಾರ ಸ್ಥಾಪಿತವಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡಾ ಅಸಹಾಯಕವಾಗಿದೆ. ವಿರೋಧಪಕ್ಷಗಳನ್ನು ನಾಶಪಡಿಸುವ ಬಿಜೆಪಿಯ ಒಟ್ಟು ಮನಸ್ಥಿತಿ ಕುರಿತಂತೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಪ್ರಧಾನಿ ಜೊತೆಗೆ ಚರ್ಚೆ ಮಾಡಿ’ ಎಂದೂ ಗಡ್ಕರಿ ಅವರಿಗೆಸಾವಂತ್‌ ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.