ನವದೆಹಲಿ: ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಬೇಕಿರುವುದರಿಂದ ದೀರ್ಘಕಾಲದವರೆಗೆ ತೆರಿಗೆ ವಿನಾಯಿತಿ ಕೋರಬೇಡಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಯಮಗಳಿಗೆ ಸೋಮವಾರ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಾರಿಗೆ ಹಾಗೂ ಹೆದ್ದಾರಿ ಸಚಿವ ಗಡ್ಕರಿ, ಇನ್ನೆರಡು ವರ್ಷಗಳಲ್ಲಿ ದೇಶದ ಸಾಗಣೆ ವೆಚ್ಚ ಶೇ 9ಕ್ಕೆ ತಗ್ಗಲಿದೆ ಎಂದು ಹೇಳಿದ್ದಾರೆ.
‘ಜಿಎಸ್‌ಟಿ ಹಾಗೂ ತೆರಿಗೆ ವಿನಾಯಿತಿ ಕೋರಬೇಡಿ. ತೆರಿಗೆ ನಿರಂತರ ಪ್ರಕ್ರಿಯೆ. ಒಂದು ವೇಳೆ ನಾವು ತೆರಿಗೆ ಕಡಿಮೆ ಮಾಡಿದರೆ, ನೀವು ಇನ್ನೂ ಹೆಚ್ಚಿನದ್ದನ್ನು ಕೇಳುತ್ತೀರಿ. ಇದು ಮಾನವನ ಸಹಜ ಗುಣ’ ಎಂದು ಹೇಳಿದ್ದಾರೆ.
‘ತೆರಿಗೆ ಕಡಿಮೆ ಮಾಡಬೇಕು ಎನ್ನುವುದು ನಮಗೂ ಇದೆ. ಆದರೆ ತೆರಿಗೆ ಇಲ್ಲದೆ ಕಲ್ಯಾಣ ಕಾರ್ಯಕ್ರಮಗಳನ್ನು ಕೊಡಲು ಆಗುವುದಿಲ್ಲ. ಶ್ರೀಮಂತರಿಂದ ತೆರಿಗೆ ಪಡೆದುಕೊಂಡು ಬಡವರಿಗೆ ಪ್ರಯೋಜನಗಳನ್ನು ನೀಡುವುದು ಸರ್ಕಾರದ ಕೆಲಸ. ಸರ್ಕಾರಕ್ಕೂ ತನ್ನದೇ ಆದ ಮಿತಿಗಳಿವೆ ’ ಎಂದಿದ್ದಾರೆ.
‘ಸದ್ಯ ಭಾರತದ ಸಾಗಣೆ ವೆಚ್ಚ ಶೇ 14–15ರಷ್ಟಿದೆ. ಮುಂದಿನ 2 ವರ್ಷಗಳಲ್ಲಿ ಅದು ಶೇ 9ಕ್ಕೆ ಇಳಿಯಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಚೀನಾದ ಸಾಗಣೆ ವೆಚ್ಚ ಶೇ 8ರಷ್ಟಿದೆ. ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಶೇ 12ರಷ್ಟಿದೆ’ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಬಂಡವಾಳ ಹೂಡಿಕೆಯಿಂದಾಗಿ ಹೆಚ್ಚಿನ ಉದ್ಯೋಗ ಸೃಜನೆಯಾಗುತ್ತಿವೆ. ನೀವು ಸಂಪತ್ತು ಸೃಷ್ಟಿಕರ್ತರು ಮಾತ್ರವಲ್ಲದೆ, ಉದ್ಯೋಗ ಸೃಷ್ಟಿಕರ್ತರೂ ಹೌದು. ಈ ಸುವರ್ಣ ಯುಗದ ಪ್ರಯೋಜನವನ್ನು ನಾವು ಬಳಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.