
ನವದೆಹಲಿ: ‘ಈಗ ನಿತಿನ್ ನಬೀನ್ ಅವರು ನಮ್ಮೆಲ್ಲರಿಗೂ ಅಧ್ಯಕ್ಷರಾಗಿದ್ದಾರೆ. ಪಕ್ಷದ ಕಾರ್ಯಕರ್ತನಾಗಿ ನಾನು ಕೂಡ ನಾನು ನಿರ್ವಹಿಸಿದ ಕೆಲಸದ ಮಾಹಿತಿಗಳನ್ನು ಅವರಿಗೆ ನೀಡಬೇಕು. ನಾನು ಇದನ್ನು ಈಗಾಗಲೇ ನೀಡಿದ್ದೇನೆ. ಈಗ ಅವರು ನನ್ನ ‘ರಿಪೋರ್ಟ್ ಕಾರ್ಡ್’ ಬರೆಯುತ್ತಾರೆ. ಪಕ್ಷದ ವಿಚಾರಗಳಲ್ಲಿ ನಿತಿನ್ ಅವರೇ, ನೀವೇ ನನ್ನ ಬಾಸ್’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬೀನ್ ಅವರು ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಇಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಂಗಳವಾರ ಘೋಷಣೆ ಮಾಡಲಾಯಿತು. ಈ ವೇಳೆ ಪ್ರಧಾನಿ ಮೋದಿ ಅವರು ಮಾತನಾಡಿದರು. ತಮ್ಮ 40 ನಿಮಿಷಗಳ ಭಾಷಣದುದ್ದಕ್ಕೂ ನಿತಿನ್ ಅವರನ್ನು ‘ಮಾನ್ಯರೇ’ ಎಂದೇ ಪ್ರಧಾನಿ ಮೋದಿ ಸಂಭೋದಿಸಿದರು.
‘ನಿತಿನ್ ಅವರು ಈಗ ನಮ್ಮೆಲ್ಲರಿಗೂ ಅಧ್ಯಕ್ಷರು. ಅವರ ಜವಾಬ್ದಾರಿಗಳು ಪಕ್ಷವನ್ನು ನಿರ್ವಹಿಸುವುದು ಮಾತ್ರವಲ್ಲ, ಎನ್‌ಡಿಎ ಮೈತ್ರಿಕೂಟದ ನಮ್ಮೆಲ್ಲಾ ಮೈತ್ರಿ ಪಕ್ಷಗಳನ್ನೂ ನಿಭಾಯಿಸಬೇಕು, ಸಹಕಾರ ಮುಂದುವರಿಯುವಂತೆ ನೋಡಿಕೊಳ್ಳಬೇಕು’ ಎಂದರು.
‘ನಿತಿನ್ ಅವರು ನವಯುಗದವರು. ಅವರಲ್ಲಿ ಯೌವನದ ಹುರುಪೂ ಇದೆ ಮತ್ತು ಸಂಘಟನೆಯ ಕುರಿತು ವಿಶಾಲ ಅನುಭವವೂ ಇದೆ. ಇದು ಪಕ್ಷಕ್ಕೆ ಸಹಕಾರಿಯಾಗಲಿದೆ. ಅವರು ಪ್ರತೀ ಮಾತುಗಳೂ ನಮಗೆ ಹೊಸ ದಿಕ್ಕು ತೋರಿಸಲಿದೆ. ಅವರ ಮಾರ್ಗದರ್ಶನವು ನಮ್ಮ ಭವಿಷ್ಯವನ್ನು ರೂಪಿಸುವ ಬೆಲೆಕಟ್ಟಲಾಗದ ಆಸ್ತಿಯಾಗಲಿದೆ’ ಎಂದರು.
ಬಿಜೆಪಿಯಲ್ಲಿ ಅಧ್ಯಕ್ಷರು ಬದಲಾಗುತ್ತಾರೆ. ಆದರೆ ಪಕ್ಷದ ಸಿದ್ಧಾಂತ ಬದಲಾಗುವುದಿಲ್ಲ. ನಾಯಕತ್ವ ಬದಲಾಗುತ್ತದೆ. ಆದರೆ ಪಕ್ಷದ ದಿಕ್ಕು ಬದಲಾಗುವುದಿಲ್ಲನರೇಂದ್ರ ಮೋದಿ ಪ್ರಧಾನಿ
ನಿತಿನ್ ಹೇಳಿದ್ದೇನು
ತಮಿಳುನಾಡು ಪಶ್ಚಿಮ ಬಂಗಾಳ ಅಸ್ಸಾಂ ಕೇರಳ ಮತ್ತು ಪುದುಚೇರಿಗಳಲ್ಲಿ ಜನಸಂಖ್ಯೆಯ ಸ್ವರೂಪದಲ್ಲಾಗಿರುವ ಬದಲಾವಣೆಗಳಿಂದ ಯಾವ ಪರಿಣಾಮ ಉಂಟಾಗಿದೆ ಎಂದು ನಾವು ನೋಡುತ್ತಿದ್ದೇವೆ. ಇದು ನಮ್ಮೆದುರಿಗೆ ಇರುವ ಬಹುದೊಡ್ಡ ಸವಾಲು. ತಮ್ಮ ಹೋರಾಟ ಮತ್ತು ಕಠಿಣ ಪರಿಶ್ರಮದ ಮೂಲಕ ತಮ್ಮೆಲ್ಲಾ ಶಕ್ತಿಯನ್ನು ಮೀರಿ ಪಕ್ಷದ ಕಾರ್ಯಕರ್ತರು ಈ ಐದು ರಾಜ್ಯಗಳಲ್ಲಿ ಶಕ್ತಿಯುತ ನಾಯಕತ್ವವನ್ನು ಒದಗಿಸುತ್ತಾರೆ ಎಂಬ ನಂಬಿಕೆ ನನಗಿದೆ * ನಮ್ಮ ಸಂಪ್ರದಾಯಕ್ಕೆ ಅಡ್ಡಿಪಡಿಸುವ ರಾಮ ಸೇತು ಇರುವುದನ್ನು ನಿರಾಕರಿಸುವ ಮತ್ತು ಕಾರ್ತಿಕ ದೀಪ ಉರಿಸುವುದನ್ನು ವಿರೋಧಿಸುವ ಶಕ್ತಿಗಳನ್ನು ಸೋಲಿಸುವ ಅಗತ್ಯವಿದೆ. ಇಂಥ ಶಕ್ತಿಗಳು ಭಾರತೀಯ ರಾಜಕಾರಣದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದಂತೆ ಮಾಡಲು ನಾವು ಯತ್ನಿಸಬೇಕು
ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲು ಬಯಸಿದ್ದಾರೆ!
‘ಚುನಾವಣೆ ಯಾವಾಗ ನಡೆಯಿತು? ಇದನ್ನು ಚುನಾವಣೆ ಎಂದು ಯಾಕೆ ಕರೆಯುತ್ತೀರಿ? ಅಧ್ಯಕ್ಷರು ಯಾರು ಎಂದು ಮೊದಲು ಘೋಷಿಸುತ್ತೀರಿ. ಆಮೇಲೆ ಚುನಾವಣೆ ನಡೆಯಲಿದೆ ಎನ್ನುತ್ತೀರಿ. ಆಮೇಲೆ ಚುನಾವಣೆಯೇ ನಡೆಯುವುದಿಲ್ಲ’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾಧ್ಯಮಗೋಷ್ಠಿಯಲ್ಲಿ ಲೇವಡಿ ಮಾಡಿದರು. ‘ಜ್ಞಾನೇಶ್ ಕುಮಾರ್ (ಚುನಾವಣಾ ಆಯೋಗದ ಮುಖ್ಯಸ್ಥ) ಅವರು ತಮ್ಮ ಪ್ರತಿಭಟನೆ ದಾಖಲಿಸಿ ರಾಜೀನಾಮೆ ನೀಡಲು ಬಯಸುತ್ತಿದ್ದಾರೆ. ಯಾಕೆಂದರೆ ಅವರಿಗೆ ಇಲ್ಲಿ ಏನೂ ಕೆಲಸವೇ ಇಲ್ಲ. ಚುನಾವಣೆಯನ್ನು ಪ್ರಭಾವಿಸಲೂ ಅವರಿಗೆ ಸಾಧ್ಯವಿಲ್ಲ. ಯಾವುದೇ ಅಕ್ರಮ ಎಸಗಲೂ ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದರು. ‘ಅವರು (ಬಿಜೆಪಿ ನಾಯಕರು) ತಮ್ಮಲ್ಲಿಯೇ ಆಟವಾಡುತ್ತಿದ್ದಾರೆ. ಕೆಲವೊಮ್ಮೆ ಮೋಹನ್ ಭಾಗವತ್ ಯಾರದ್ದೋ ಬಾಸ್ ಆಗುತ್ತಾರೆ. ಕೆಲವೊಮ್ಮೆ ಮೋದಿ ಅವರು ಯಾರದ್ದೋ ಬಾಸ್ ಆಗುತ್ತಾರೆ. ಸಾಧುಗಳ ಕಣ್ಣೀರಿನ ಬಗ್ಗೆ ಗಮನವಿಲ್ಲ ಬಾಸ್–ಬಾಸ್ ಆಟ ಆಡುತ್ತಿದ್ದಾರೆ’ ಎಂದರು. ಉತ್ತರ ಪ್ರದೇಶದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಬಂದಿದ್ದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ತಡೆದ ಘಟನೆಯನ್ನು ಪ್ರಸ್ತಾಪಿಸಿ ಅವರು ಈ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.