ನಿತಿನ್ ನಬಿನ್ ಅವರು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ರಾಜನಾಥ ಸಿಂಗ್ ಮತ್ತು ನರೇಂದ್ರ ಮೋದಿ ಇದ್ದಾರೆ. ಕೆ. ಲಕ್ಷ್ಮಣ್ ಅವರು ಪ್ರಮಾಣಪತ್ರ ನೀಡಿ ಅಭಿನಂದಿಸಿದರು
ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಇಂದು (ಮಂಗಳವಾರ) ಅಧಿಕಾರ ವಹಿಸಿಕೊಂಡರು.
ನಿಕಟಪೂರ್ವ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಪೂರ್ಣಗೊಂಡ ಬೆನ್ನಲ್ಲೇ ಪಕ್ಷ ನಡೆಸಿದ ಚುನಾವಣೆಯಲ್ಲಿ ನಿತಿನ್ ಅವರು ಅವಿರೋಧವಾಗಿ ಆಯ್ಕೆಯಾದರು.
ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅವರ ಸಮ್ಮುಖದಲ್ಲಿ ನಿತಿನ್ ನಬಿನ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಬಿಜೆಪಿ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ನಬಿನ್ ಅವರ ಆಯ್ಕೆಯನ್ನು ಘೋಷಿಸಿ, ಪ್ರಮಾಣಪತ್ರವನ್ನು ನೀಡಿದರು.
‘ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ನಾಯಕತ್ವವನ್ನು ದೊರೆಯುತ್ತದೆಯೇ ಹೊರತು, ವಂಶಪಾರಂಪರ್ಯ ಸವಲತ್ತಿನಿಂದಲ್ಲ’ ಎಂದು ಲಕ್ಷ್ಮಣ್ ಹೇಳಿದರು.
1980ರಲ್ಲಿ ಸ್ಥಾಪನೆಯಾದ ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಬಿನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಪಕ್ಷದ ಕಾರ್ಯಾಧ್ಯಕ್ಷರಾಗಿ ಅವರನ್ನು ಬಿಜೆಪಿ ನೇಮಿಸಿತ್ತು. ನೂತನ ಹುದ್ದೆಗೆ ಸ್ಪರ್ಧೆಗೂ ಮೊದಲ ಅವರು ಬಿಹಾರ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ, ವಸತಿ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಪ್ರಮಾಣವಚನಕ್ಕೂ ಮುನ್ನ ದೇವಾಲಯಗಳು ಮತ್ತು ಬಂಗಲಾ ಸಾಹಿಬ್ ಗುರುದ್ವಾರಕ್ಕೆ ಇಂದು (ಮಂಗಳವಾರ) ಬೆಳಿಗ್ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರೊಂದಿಗೆ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಮತ್ತು ದೆಹಲಿ ಸಚಿವರಾದ ಪರ್ವೇಶ್ ಸಾಹೀಬ್ ಸಿಂಗ್ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಇದ್ದರು.
ಮೊದಲಿಗೆ ಜಂಡೇವಾಲ ದೇವಾಲಯದಲ್ಲಿ ನಿತಿನ್ ಅವರು ಪ್ರಾರ್ಥನೆ ಸಲ್ಲಿಸಿದರು. ನಂತರ ಮಂದಿರ್ ಮಾರ್ಗದಲ್ಲಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಕನೌಟ್‌ನಲ್ಲಿರುವ ಪ್ರಾಚೀನ ಹನುಮಾನ್ ಮಂದಿರ ಹಾಗೂ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು ಎಂದು ಬಿಜೆಪಿ ಹೇಳಿದೆ.
ಅವಿರೋಧ ಆಯ್ಕೆಯ ನಂತರ ನಿತಿನ್ ನಬಿನ್ ಅವರು ನೂತನ ರಾಷ್ಟ್ರೀಯ ಅಧ್ಯಕ್ಷ ಎಂದು ಬಿಜೆಪಿ ಅಧಿಕೃತವಾಗಿ ಮಂಗಳವಾರ ಘೋಷಿಸಿದೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸಲಿಲ್ಲ.
ಬಿಹಾರ ಮೂಲದವರಾರ ನಬಿನ್ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯರೂ ಹೌದು. ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ನಿತಿನ್ ಅವರ ಆಯ್ಕೆ ನಡೆದಿದೆ.
45 ವರ್ಷದ ನಬಿನ್ ಅವರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿರಿಯ ಮುಖಂಡರು ಅನುಮೋದಿಸಿ ಬೆಂಬಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.