
ನವದೆಹಲಿ: ಬಿಹಾರದ ಸಚಿವ ನಿತಿನ್ ನಬೀನ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ಭಾನುವಾರ ನೇಮಿಸಲಾಗಿದೆ.
ಕಾಯಸ್ಥ ಸಮುದಾಯಕ್ಕೆ ಸೇರಿದ 45 ವರ್ಷ ವಯಸ್ಸಿನ ನಿತಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆಯಿದೆ.
ಐದು ಬಾರಿ ಶಾಸಕರಾಗಿರುವ ನಿತಿನ್, ಬಿಹಾರದ ಬಾಂಕೀಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಬಿಹಾರ ಸರ್ಕಾರದಲ್ಲಿ ಈ ಹಿಂದೆಯೂ ಎರಡು ಸಲ ಸಚಿವರಾಗಿ ಕೆಲಸ ಮಾಡಿದ್ದಾರೆ.
‘ಬಿಜೆಪಿಯ ಸಂಸದೀಯ ಮಂಡಳಿಯು ನಿತಿನ್ ನಬೀನ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
65 ವರ್ಷದ ನಡ್ಡಾ ಅವರು 2020ರ ಜನವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವರ ಅಧಿಕಾರದ ಅವಧಿ ಈಗಾಗಲೇ ಪೂರ್ಣಗೊಂಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಅವರ ಅಧಿಕಾರದ ಅವಧಿಯನ್ನು ವಿಸ್ತರಿಸಲಾಗಿತ್ತು.
ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷರಾಗಿ ಪಂಕಜ್ ಚೌಧರಿ
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರನ್ನು ಬಿಜೆಪಿ ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷರಾಗಿ ಘೋಷಿಸಲಾಗಿದೆ.
ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಪಂಕಜ್ ಶನಿವಾರ ನಾಮಪತ್ರ ಸಲ್ಲಿಸಿದ್ದರು. ಒಬ್ಬರೇ ಕಣದಲ್ಲಿದ್ದ ಕಾರಣ ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಭಾನುವಾರ ಅವರ ಅವಿರೋಧ ಆಯ್ಕೆಯನ್ನು ಔಪಚಾರಿಕವಾಗಿ ಘೋಷಿಸಿದರು. ನಿರ್ಗಮಿತ ಅಧ್ಯಕ್ಷ ಭೂಪೇಂದ್ರ ಚೌಧರಿ ಅವರು ಪಕ್ಷದ ಬಾವುಟವನ್ನು ಪಂಕಜ್ ಅವರಿಗೆ ಹಸ್ತಾಂತರಿಸಿದರು.
ನಿತಿನ್ ನಬೀನ್ ವಿನಮ್ರ ಸ್ವಭಾವ ಸಂಘಟನಾ ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಸಾಮರ್ಥ್ಯ ಸಮರ್ಪಣಾ ಮನೋಭಾವ ಮುಂಬರುವ ದಿನಗಳಲ್ಲಿ ನಮ್ಮ ಪಕ್ಷವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.