ಪಟ್ನಾ(ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ತನೆಯು ಅವರ ಮಾನಸಿಕ ಆರೋಗ್ಯ ಮತ್ತು ಸರ್ಕಾರ ನಡೆಸುವ ಸಾಮರ್ಥ್ಯದ ಬಗ್ಗೆ ಹೊಸ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾನುವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ತೇಜಸ್ವಿ ಯಾದವ್ ಹಂಚಿಕೊಂಡಿದ್ದಾರೆ. ನಿತೀಶ್ ಕುಮಾರ್ ಅವರು ವರ್ಚುವಲ್ ಆಗಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
‘ನಿತೀಶ್ ಕುಮಾರ್ ಅವರ ಈ ಮಾನಸಿಕ ಸ್ಥಿತಿಗೆ ಅವರ ಆಪ್ತ ಸಹಾಯಕರು ಕಾರಣರಾಗಿರಬಹುದೇ? ಮೈತ್ರಿಕೂಟದ ಪಾಲುದಾರ ಬಿಜೆಪಿಯ ಅಣತಿಯಂತೆ ಅವರ ಆಹಾರಕ್ಕೆ ಏನಾದರೂ ಬೆರೆಸಿರಬಹುದೇ?’ ಎಂದು ತಮ್ಮ ಪೋಸ್ಟ್‌ನಲ್ಲಿ ತೇಜಸ್ವಿ ಪ್ರಶ್ನಿಸಿದ್ದಾರೆ.
ನಂತರ, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ, ‘ಸ್ವಲ್ಪ ಸಮಯದಿಂದ ನಿತೀಶ್ ಕುಮಾರ್ ಅವರು ಸರಿಯಾದ ಮನಸ್ಥಿತಿಯಲ್ಲಿಲ್ಲ ಎಂಬುದು ಅವರ ವರ್ತನೆಯಿಂದ ತಿಳಿಯುತ್ತದೆ. ನನ್ನ ತಾಯಿ ರಾಬ್ರಿ ದೇವಿ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ. ಒಂದು ಬಾರಿಯಂತೂ ರಾಷ್ಟ್ರಗೀತೆ ವೇಳೆ ಅವರು ಬಾಲಿಶವಾಗಿ ನಡೆದುಕೊಂಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು’ ಎಂದು ಹೇಳಿದ್ದಾರೆ.
‘ನಿನ್ನೆ ಅವರ ಅಶಿಸ್ತಿನ ವರ್ತನೆಯ ಮತ್ತೊಂದು ಉದಾಹರಣೆಯನ್ನು ನಾವು ನೋಡಿದ್ದೇವೆ’ ಎಂದು ವಿಡಿಯೊ ಬಗ್ಗೆ ಮಾತನಾಡಿದ್ದಾರೆ.
ವಿಡಿಯೊದಲ್ಲಿ ಹಿರಿಯ ಬಿಜೆಪಿ ನಾಯಕ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮಾತನಾಡುತ್ತಿರುವ ವೇಳೆ ನಿತೀಶ್ ಕುಮಾರ್ ಅವರು ತಮ್ಮ ಕಂಪ್ಯೂಟರ್ ಪರದೆಯತ್ತ ಕೈಜೋಡಿಸಿ ಪದೇ ಪದೇ ನಮಸ್ಕಾರ ಮಾಡುತ್ತಿರುವುದು ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.