ADVERTISEMENT

ಪಠ್ಯದಲ್ಲಿ ಸಮಾಜವಾದಿ ಚಿಂತಕರ ವಿಷಯ ಕೈಬಿಟ್ಟಿರುವುದಕ್ಕೆ ನಿತೀಶ್ ಸರ್ಕಾರದ ಆಕ್ಷೇಪ

ಪಿಟಿಐ
Published 3 ಸೆಪ್ಟೆಂಬರ್ 2021, 5:55 IST
Last Updated 3 ಸೆಪ್ಟೆಂಬರ್ 2021, 5:55 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ರಾಜ್ಯದ ವಿಶ್ವವಿದ್ಯಾಲಯದ ಕೋರ್ಸ್‌ವೊಂದರ ರಾಜಕೀಯ ವಿಜ್ಞಾನ ಪುಸ್ತಕಗಳಿಂದ ರಾಮ್‌ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ ಅವರಂತಹ ಸಮಾಜವಾದಿಗಳ ಚಿಂತನೆಗಳ ವಿಷಯವನ್ನು ಕೈಬಿಟ್ಟಿರುವುದಕ್ಕೆ ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸರನ್ ಜಿಲ್ಲೆಯ ಜಯಪ್ರಕಾಶ್‌ ನಾರಾಯಣ್‌ ವಿಶ್ವವಿದ್ಯಾಲಯದ(ಜೆಪಿ ವಿವಿ) ಸ್ನಾತಕೋತ್ತರ ಪದವಿಯ ರಾಜಕೀಯ ವಿಜ್ಞಾನ ಪಠ್ಯದಲ್ಲಿ ಸಮಾಜವಾದಿ ಚಿಂತಕರ ವಿಷಯಗಳನ್ನು ಕೈಬಿಡಲಾಗಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ವಿಜಯ್‌ಕುಮಾರ್ ಚೌಧರಿ, ‘ನಮ್ಮ ಸರ್ಕಾರ ಈ ಬದಲಾವಣೆಯನ್ನು ಸಮ್ಮತಿಸುವುದಿಲ್ಲ‘ ಎಂದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಜೆಪಿ ವಿವಿಯ ಅಧಿಕಾರಿಗಳನ್ನು ಕರೆಸಿ ಸಮಾಜವಾದಿ ಚಿಂತಕರ ವಿಷಯಗಳನ್ನು ಕೈಬಿಟ್ಟಿರುವುದಕ್ಕೆ ಕಾರಣವೇನೆಂದು ಮಾಹಿತಿ ಪಡೆದಿದ್ದಾರೆ.

ADVERTISEMENT

‘ಬುಧವಾರ ಬೆಳಿಗ್ಗೆ ವರದಿಯನ್ನು ಓದಿ ನನಗೂ ಗಾಬರಿಯಾಯಿತು. ತಕ್ಷಣವೇ ನಾನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪೌಢಶಿಕ್ಷಣ ಮಂಡಳಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದೆ. ಆದರೆ, ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅದೇ ವೇಳೆಗೆ ನನಗೂ ಮುಖ್ಯಮಂತ್ರಿಯವರು ಕರೆ ಮಾಡಿ, ಪಠ್ಯಕ್ರಮ ಬದಲಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು‘ ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದರು.

‘ಜೆಪಿ ವಿವಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಹೊಸ ಶಿಕ್ಷಣ ನೀತಿ ಜಾರಿಗೆ ಬಂದ ನಂತರ 2018ರಲ್ಲಿ ತಜ್ಞರು ಸಮಿತಿ ಮಾಡಿದ ಶಿಫಾರಸುಗಳಿಗೆ ಅನುಸಾರವಾಗಿ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ‘ ಎಂದು ಅವರು ತಿಳಿಸಿರುವುದಾಗಿ ಸಚಿವರು ಹೇಳಿದರು.

‘ಏನೇ ಆಗಲಿ, ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೇ ಪಠ್ಯಕ್ರಮ ಬದಲಾಯಿಸುವಂತಹ ಯಾವುದೇ ಪ್ರಕ್ರಿಯೆಗಳನ್ನು ಕೈಗೊಳ್ಳಬಾರದು‘ ಎಂಬುದು ನಮ್ಮ ಪ್ರತಿಪಾದನೆಯಾಗಿದೆ ಎಂದು ಅವರು ಹೇಳಿದರು.

‘ಭಾರತದ ರಾಜಕಾರಣದಲ್ಲಿ ಸಮಾಜವಾದ ಎನ್ನುವುದು ಒಂದು ವಿಶಿಷ್ಟ ಸೈದ್ದಾಂತಿಕ ಅಲೆ. ಬಿಹಾರ ರಾಜ್ಯ ಸಮಾಜವಾದ ಸಿದ್ಧಾಂತದ ಪ್ರಯೋಗಗಳ ಪ್ರಮುಖ ತಾಣ. ಇಂಥ ನೆಲದಲ್ಲಿ ಹುಟ್ಟಿದ, ಸಮಾಜವಾದಿ ಸಿದ್ಧಾಂತ ಪ್ರತಿಪಾದಕ ಜೆಪಿ(ಜಯಪ್ರಕಾಶ್‌ ನಾರಾಯಣ್‌) ಅವರೊಂದಿಗೆ ರಾಜ್ಯದ ಜನರು ಪ್ರಬಲವಾದ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ‘ ಎಂದು ಚೌಧರಿ ಹೇಳಿದರು.

ಇದೇ ವೇಳೆ ಚೌಧರಿ ಅವರು, ಪಠ್ಯಗಳಲ್ಲಿ ಆರ್‌ಎಸ್‌ಎಸ್‌ನ ಪ್ರಮುಖರಾದ ದೀನ್ ದಯಾಳ್ ಉಪಾಧ್ಯಾಯ ಅವರ ಚಿಂತನೆಗಳನ್ನು ಪಠ್ಯಕ್ರಮದಲ್ಲಿ ಸೇರಿಸಿರುವ ಬಗ್ಗೆಯೂ ವಿವಿಯವರನ್ನು ಕೇಳಿದ್ದಾಗಿ ಹೇಳಿದ್ದಾರೆ.

‘ಯಾವುದೇ ರಾಜಕೀಯ ಸಂಬಂಧಿತ ಚಿಂತಕರನ್ನು ಪಠ್ಯಕ್ರಮದಿಂದ ಹೊರಗಿಡಬಾರದು ಎಂಬುದು ನಮ್ಮ ವಾದ. ಯಾರ ಸೇರ್ಪಡೆಗೂ ಆಕ್ಷೇಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾವು ಭಾವಿಸುತ್ತೇವೆ‘ ಎಂದು ಚೌಧರಿ ಹೇಳಿದರು.

ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗಿರುವ ರಾಜ್ಯಪಾಲ ಫಾಗು ಚೌಹಾಣ್ ಅವರೊಂದಿಗೆ ಈ ಪಠ್ಯಕ್ರಮ ಬದಲಾವಣೆಯ ವಿಷಯವನ್ನು ಚರ್ಚಿಸಲಿದ್ದೇನೆ. ಇದೇ ವೇಳೆ, ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲೂ ಇಂಥ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂದು ಪರೀಕ್ಷಿಸಲು ಸಂಬಂಧಿಸಿದವರಿಗೆ ಸೂಚಿಸಿದ್ದೇನೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.