ADVERTISEMENT

ನಿತೀಶ್ ಕುಮಾರ್‌ಗೆ ಪ್ರಧಾನಿಯಾಗುವ ಅರ್ಹತೆಯಿದೆ: ಜೆಡಿಯು ಪ್ರತಿಪಾದನೆ

ಪಿಟಿಐ
Published 30 ಆಗಸ್ಟ್ 2021, 19:23 IST
Last Updated 30 ಆಗಸ್ಟ್ 2021, 19:23 IST
ನಿತೀಶ್ ಕುಮಾರ್‌ (ಪಿಟಿಐ ಚಿತ್ರ)
ನಿತೀಶ್ ಕುಮಾರ್‌ (ಪಿಟಿಐ ಚಿತ್ರ)   

ಪಟ್ನಾ: ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರಿಗೆ ಪ್ರಧಾನಿಯಾಗುವ ಸಾಮರ್ಥ್ಯವಿದೆ ಎಂದು ಪಕ್ಷವು ಪ್ರತಿಪಾದಿಸಿದೆ.

ಒಂದು ತಿಂಗಳ ಅವಧಿಯಲ್ಲಿ ಜೆಡಿಯು ಇದೇ ಮಾತನ್ನು ಎರಡು ಬಾರಿ ಹೇಳಿದೆ. ಆಗಸ್ಟ್ 1ರಂದು ಉಪೇಂದ್ರ ಕುಶ್ವಾಹ ಅವರು, ‘ನಿತೀಶ್ ಪ್ರಧಾನಿ ಆಗುವುದಾದರೆ, ಸಂಖ್ಯಾಬಲ ಒಂದು ಸಮಸ್ಯೆಯೇ ಅಲ್ಲ’ ಎಂದು ಹೇಳಿದ್ದರು.

ಸೋಮವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಸಮಾಲೋಚನಾ ಸಮಿತಿ ಸಭೆಯಲ್ಲಿ, ಜೆಡಿಯುಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಅವರು, ‘ನಿತೀಶ್ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿ ಅಲ್ಲ. ಆದರೆ ಅವರಿಗೆ ಆ ಸಾಮರ್ಥ್ಯವಿದೆ.’ ಎಂದು ಹೇಳಿದ್ದಾರೆ.

ADVERTISEMENT

ಈ ಮೂಲಕ ಎನ್‌ಡಿಎಯಲ್ಲಿನ ಬಿರುಕು ಮತ್ತು ನಿತೀಶ್ ಕುಮಾರ್ ಅವರ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಪಕ್ಷವು ಸುಳಿವು ನೀಡುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 2015-16ರ ಸಮಯದಲ್ಲಿ ನಿತೀಶ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿ ಎಂದು ಬಿಂಬಿಸಲಾಗಿತ್ತು. ನಂತರ ಅವರು ವಿರೋಧ ಪಕ್ಷಗಳ ಮಹಾಮೈತ್ರಿಯನ್ನು ತೊರೆದು, ಬಿಜೆಪಿ ನೇತೃ
ತ್ವದ ಎನ್‌ಡಿಎ ಸೇರಿದರು. ಈಗ ಬಿಹಾರದಲ್ಲಿ ಎನ್‌ಡಿಎ ಸರ್ಕಾರವೇ ಇದೆ.

ಆದರೆ, ಜೆಡಿಯು ಹಲವು ವಿಚಾರಗಳಲ್ಲಿ ಬಿಜೆಪಿಯ ನಿಲುವುಗಳಿಗೆ ವಿರುದ್ಧವಾದ ನಿಲುವುಗಳನ್ನು ಪ್ರತಿಪಾದಿಸಿದೆ. ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಜೆಡಿಯು ಯತ್ನಿಸುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

‘ನಿತೀಶ್ ಪ್ರಧಾನಿ ಮೆಟೀರಿಯಲ್’ ಎಂಬ ಹೇಳಿಕೆಯಿಂದ ಬಿಹಾರ ಬಿಜೆಪಿ ನಾಯಕರಿಗೆ ಕಿರಿಕಿರಿಯಾಗಿದೆ. ಬಿಹಾರ ಬಿಜೆಪಿಯು, ‘ಜೆಡಿಯು ಕನಸು ಕಾಣಬಾರದು’ ಎಂದು ಹೇಳಿದೆ. ಜೆಡಿಯು ಸಹ ಅದಕ್ಕೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದೆ.

*
ಯಾರಾದರೂ ಪ್ರಧಾನಿ ಆಗಬೇಕೆಂದರೆ 272 ಸಂಸದರ ಬೆಂಬಲ ಬೇಕು. ಜೆಡಿಯುನಿಂದ ಅಷ್ಟೊಂದು ಸಂಸದರು ಆಯ್ಕೆಯಾಗಿ ಬರುವ ಸಾಧ್ಯತೆಯೇ ಇಲ್ಲ.
-ಬಿಹಾರ ಬಿಜೆಪಿ ಘಟಕ

*
ಜನರು ಈಗ ಕಪೋಲಕಲ್ಪಿತ ಭವಿಷ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಅದು ಸಾಧ್ಯವಾಗುತ್ತದೆ ಎಂದಾದರೆ, ಅಸಾಧ್ಯವಾದುದು ಯಾವುದೂ ಇಲ್ಲ.
–ಉಪೇಂದ್ರ ಕುಶ್ವಾಹ, ಜೆಡಿಯು ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.