ADVERTISEMENT

ತಬ್ಲಿಗಿ ಜಮಾತ್‌ಗೆ ಹಾಜರಾದವರು: 2000 ಮಂದಿಯ ರಾಜ್ಯವಾರು ಪಟ್ಟಿ, ವಿವರ ಇಲ್ಲಿದೆ

ಏಜೆನ್ಸೀಸ್
Published 1 ಏಪ್ರಿಲ್ 2020, 17:06 IST
Last Updated 1 ಏಪ್ರಿಲ್ 2020, 17:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಲ್ಲಿನ ನಿಜಾಮುದ್ದೀನ್ ವೆಸ್ಟ್ ಪ್ರದೇಶದಲ್ಲಿರುವ ತಬ್ಲಿಗ್-ಇ-ಜಮಾತ್‌ನ ಧಾರ್ಮಿಕ ಸಮಾವೇಶದಲ್ಲಿ ವಿದೇಶೀಯರೊಂದಿಗೆ ಭಾರತದ ವಿವಿಧ ರಾಜ್ಯಗಳ ಧರ್ಮ ಪ್ರಚಾರಕರೂ ಭಾಗವಹಿಸಿದ್ದು, ಈ ರಾಜ್ಯಗಳ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಈ ನಡುವೆ, ತಬ್ಲಿಗಿ ಜಮಾತ್ ಸಭೆಯಲ್ಲಿ ಭಾಗವಹಿಸಲು 2100 ವಿದೇಶೀಯರು ಜನವರಿ ತಿಂಗಳಿಂದಲೇ ಭಾರತಕ್ಕೆ ಬಂದಿದ್ದರು ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತವು ಲಾಕ್‌ಡೌನ್‌ನ ಎರಡನೇ ವಾರಕ್ಕೆ ಕಾಲಿಟ್ಟ ಹಂತದಲ್ಲಿ, ಕಳೆದ 24 ಗಂಟೆಗಳಲ್ಲಿ 200ರಷ್ಟು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ಡಿಜಿಪಿಗಳೊಂದಿಗೆ ಬುಧವಾರ ವಿಡಿಯೊ ಕಾನ್ಫರೆನ್ಸಿಂಗ್ ನಡೆಸಿ, ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ತ್ವರಿತವಾಗಿ ಪತ್ತೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅವರನ್ನು ಕ್ವಾರಂಟೈನ್‌ಗೆ (ಪ್ರತ್ಯೇಕವಾಸಕ್ಕೆ) ಒಳಪಡಿಸದಿದ್ದರೆ, ಇದುವರೆಗೆ ಕೊರೊನಾ ವೈರಸ್ ಹರಡುವಿಕೆ ತಡೆಗೆ ಕೈಗೊಂಡ ಕಾರ್ಯಗಳೆಲ್ಲವೂ ವಿಫಲವಾಗುವ ಆತಂಕವಿದೆ ಎಂದು ಎಚ್ಚರಿಸಿದ್ದಾರೆ ಅವರು.

ಮಾ.13ರಿಂದ 15ರವರೆಗೆ ಹಾಗೂ ಮಾ.23ರಂದು ಕೊನೆಗೊಂಡ ತಬ್ಲಿಗಿ ಜಮಾತ್‌ನ 2 ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೊರದೇಶಗಳಿಂದ ಬಂದಿರುವ ಮತ ಪ್ರಚಾರಕರು ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತೊಂದು ಆತಂಕಕ್ಕೆ ಕಾರಣವಾದ ಅಂಶವಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ತಬ್ಲಿಗಿ ಜಮಾತ್ ಮುಖ್ಯಸ್ಥರೂ ಸೇರಿದಂತೆ ಹಲವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ.

ಸಮಾವೇಶ ನಡೆದ ಬಳಿಕವೂ ಈ ಕೇಂದ್ರದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ತಂಗಿದ್ದು, ಇದೀಗ ಆ ತಾಣವೀಗ ವೈರಸ್ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದೆ. ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಮಂದಿ ದೇಶಾದ್ಯಂತ ಓಡಾಡಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಕೊರೊನಾ ವೈರಸ್ ಸೋಂಕಿತರಾಗಿದ್ದಾರೆ. ಅವರಿಂದ ಮತ್ತಷ್ಟು ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಲು ಅವರನ್ನು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ ಪ್ರತ್ಯೇಕ ವಾಸದಲ್ಲಿಡಲು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಈ ಮಧ್ಯೆ, 36 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬುಧವಾರ ನಸುಕಿನ 4 ಗಂಟೆಯ ವೇಳೆಗೆ, ದೆಹಲಿಯ ಮರ್ಕಜ್ ಮಸೀದಿಯ ಕಟ್ಟಡದಿಂದ 2361 ಮಂದಿಯನ್ನು ತೆರವುಗೊಳಿಸಲಾಗಿದ್ದು, 617 ಮಂದಿಯನ್ನು ಆಸ್ಪತ್ರೆಗೆ ಹಾಗೂ ಉಳಿದವರನ್ನು ಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್) ಕಳುಹಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಹೇಳಿದ್ದಾರೆ.

ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ 200ಕ್ಕಿಂತ ಹೆಚ್ಚು ಜನ ಸೇರಬಾರದು ಎಂದು ಮಾರ್ಚ್ 13ರಂದು ದೆಹಲಿ ಸರ್ಕಾರದ ಆದೇಶದಬಳಿಕವೂ ಈ ಮಸೀದಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಇದು ಮಸೀದಿ ಆವರಣದೊಳಗೆ ನಡೆಯುತ್ತಿರುವ ಸಮಾವೇಶ ಆಗಿರುವುದರಿಂದ,ಸೂಕ್ತ ಆರೋಗ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಮರ್ಕಜ್ ಮಸೀದಿ ಆಡಳಿತ ಮಂಡಳಿ ಸ್ಪಷ್ಟಪಡಿಸಿತ್ತಲ್ಲದೆ, ಮಾ.22ರ ಜನತಾ ಕರ್ಫ್ಯೂ ಹಾಗೂ ನಂತರದ ಲಾಕ್‌ಡೌನ್ ಬಳಿಕ ಅಲ್ಲಿಂದ ಹೊರ ಹೋಗಲು ಸಾಧ್ಯವಾಗಿಲ್ಲ ಎಂದು ಹೇಳಿತ್ತು.

ಒಟ್ಟಾರೆಯಾಗಿ ಈ ಮಸೀದಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ಜಗತ್ತಿನ 16 ದೇಶಗಳಿಂದ ಹಾಗೂ ಭಾರತದ 19 ರಾಜ್ಯಗಳಿಂದ ಧರ್ಮಗುರುಗಳು, ಅನುಯಾಯಿಗಳು ಭಾಗವಹಿಸಿದ್ದಾರೆ, ಕೆಲವರು ತಮ್ಮ ಊರುಗಳಿಗೆ ವಾಪಸಾಗಿದ್ದಾರೆ. ವಾಪಸಾಗುವ ಮುನ್ನ ದೇಶದ ಇತರ ಭಾಗಗಳಿಗೂ ಓಡಾಡಿದ್ದಾರೆ. ಈಗ ಈ 19 ರಾಜ್ಯಗಳ ಮಂದಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ತಮಿಳುನಾಡಿನಿಂದ ಗರಿಷ್ಠ 1500ರಷ್ಟು ಮಂದಿ ಈ ಧಾರ್ಮಿಕ ಸಭೆಗೆ ಹಾಜರಾಗಿದ್ದು, 800ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ 21ರ ಮಾಹಿತಿ ಪ್ರಕಾರ, 824 ವಿದೇಶೀ ತಬ್ಲಿಗಿ ಜಮಾತ್ ಕಾರ್ಯಕರ್ತರು ಮತ ಪ್ರಚಾರಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಸುತ್ತಾಡಿದ್ದಾರೆ, ಜೊತೆಗೆ 216 ವಿದೇಶೀಯರು ನಿಜಾಮುದ್ದೀನ್ ಮಸೀದಿಯಲ್ಲೇ ಉಳಿದುಕೊಂಡಿದ್ದರು. ಮಾ.23ರಂದು ಮತ್ತೊಂದು ಸಭೆ ನಡೆದಿದ್ದು, ಅದರಲ್ಲಿಯೂ ಹಲವರು ಭಾಗಿಯಾಗಿದ್ದರು. ಇದು ತಮಿಳುನಾಡಿನ ಘಟಕದವರಿಗಾಗಿ ನಡೆದ ಸಭೆಯಾಗಿತ್ತು ಎಂದು ತಬ್ಲಿಗಿ ಜಮಾತ್‌ನ ಮುಖ್ಯಾಲಯದ ವಕ್ತಾರರಾದ ತಮೀನ್ ಅನ್ಸಾರಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರಂಭಿಕ ಸಮಾವೇಶದಲ್ಲಿ ಭಾಗಿಯಾದವರ ಅಂದಾಜು ಸಂಖ್ಯೆ ಕೆಳಗಿದೆ. ತಮಿಳುನಾಡು ಘಟಕಕ್ಕಾಗಿ ನಡೆದ ಪ್ರತ್ಯೇಕ ಸಭೆಯಲ್ಲಿ ಸುಮಾರು 1500 ಮಂದಿ ಭಾಗವಹಿಸಿದ್ದರೆಂಬ ಅಂದಾಜಿದೆ. ಕೆಲವರು ಮಾ.12ರಿಂದ ನಡೆದ 3 ದಿನಗಳ ಸಮಾವೇಶಕ್ಕೆ ಹೋದವರು, ಇನ್ನು ಕೆಲವರು ತಮಿಳುನಾಡು ಘಟಕದ ಸಮಾವೇಶದಲ್ಲಿ ಭಾಗಿಯಾದವರು.ಇನ್ನು, ಎಲ್ಲ ರಾಜ್ಯಗಳಲ್ಲಿ ಈ ಜನರು ಹೋದೆಡೆಗಳಲ್ಲಿ ಸಂಪರ್ಕಿಸಿದವರ ಸಂಖ್ಯೆ ಸಿಗುವುದು ಕಷ್ಟ. ಕೆಲವರನ್ನು ದೆಹಲಿಯಲ್ಲೇ ಆಸ್ಪತ್ರೆಗೆ ಸೇರಿಸಲಾಗಿದೆ ಇಲ್ಲವೇ ಪ್ರತ್ಯೇಕ ವಾಸಕ್ಕೆ (14 ದಿನಗಳ ಕ್ವಾರಂಟೈನ್) ಒಳಪಡಿಸಲಾಗಿದೆ.

ತಬ್ಲಿಗಿ ಜಮಾತ್ ಮರ್ಕಜ್ ಸಮಾವೇಶದಲ್ಲಿ ಭಾಗಿಯಾದವರಲ್ಲಿ ಗುರುತು ಪತ್ತೆಯಾಗಿರುವ ಸುಮಾರು 2000 ಮಂದಿಯ ರಾಜ್ಯವಾರು ವಿವರ ಇಲ್ಲಿದೆ (ಪಟ್ಟಿ ಸಮಗ್ರವಲ್ಲ):
ತಮಿಳುನಾಡು 510
ಅಸ್ಸಾಂ 216
ಉತ್ತರ ಪ್ರದೇಶ 156
ಮಹಾರಾಷ್ಟ್ರ 109
ಮಧ್ಯಪ್ರದೇಶ 107
ಬಿಹಾರ 86
ಪಶ್ಚಿಮ ಬಂಗಾಳ 73
ತೆಲಂಗಾಣ 55
ಕರ್ನಾಟಕ 54
ಛತ್ತೀಸಗಢ 46
ಉತ್ತರಾಖಂಡ 34
ಹರ್ಯಾಣ 22
ಅಂಡಮಾನ್ 21
ರಾಜಸ್ಥಾನ 19
ಹಿಮಾಚಲ ಪ್ರದೇಶ 15
ಕೇರಳ 15
ಒಡಿಶಾ 15
ಪಂಜಾಬ್ 9
ಮೇಘಾಲಯ 5

ದಕ್ಷಿಣದ ರಾಜ್ಯಗಳಲ್ಲಿ (ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ) ಕೊರೊನಾ ವೈರಸ್ ಸೋಂಕಿತರ ಪತ್ತೆ ದಿಢೀರ್ ಏರಿಕೆಯಾಗಿದೆ. ತಮಿಳುನಾಡಿನಿಂದ ಸುಮಾರು 1500, ತೆಲಂಗಾಣ-ಆಂಧ್ರದಿಂದ ಸುಮಾರು 1000 ಮಂದಿ ಸೇರಿ ದಕ್ಷಿಣದ ರಾಜ್ಯಗಳಿಂದಲೇ ಒಟ್ಟು ಸುಮಾರು 3000 ಮಂದಿ 2 ಸಮಾವೇಶಗಳಲ್ಲಿ ಭಾಗಿಯಾಗಿದ್ದರು ಎಂದು ಅಂದಾಜಿಸಲಾಗಿದೆ.

ತಮಿಳುನಾಡಿನಿಂದ ಹೋದ 1500 ಮಂದಿಯಲ್ಲಿ 300 ಮಂದಿಯನ್ನು ಪತ್ತೆ ಮಾಡಲಾಗಿಲ್ಲ. ಕರ್ನಾಟಕದಲ್ಲಿಯೂ ಸುಮಾರು 342 ಮಂದಿ ಭಾಗಿಯಾಗಿದ್ದರೆಂಬ ಮಾಹಿತಿ ಇದೆ. ಸಮಾವೇಶದಲ್ಲಿ ಭಾಗಿಯಾದವರು ತಕ್ಷಣ ಮಾಹಿತಿ ನೀಡಿ ಎಂದು ದಕ್ಷಿಣದ ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ಸಚಿವರು, ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.