ADVERTISEMENT

ದಾಖಲೆ, ವಕೀಲರ ಕೊರತೆಯಿಂದ 77 ಲಕ್ಷಕ್ಕೂ ಅಧಿಕ ವ್ಯಾಜ್ಯಗಳ ವಿಚಾರಣೆ ಬಾಕಿ: ಸಿಜೆಐ

ಪಿಟಿಐ
Published 30 ಡಿಸೆಂಬರ್ 2022, 12:52 IST
Last Updated 30 ಡಿಸೆಂಬರ್ 2022, 12:52 IST
ಸಿಜೆಐ ಚಂದ್ರಚೂಡ್
ಸಿಜೆಐ ಚಂದ್ರಚೂಡ್   

ಅಮರಾವತಿ: ಕೋರ್ಟ್‌ಗಳಲ್ಲಿ ವಾದ ಮಂಡಿಸಲು ವಕೀಲರು ಲಭ್ಯವಿಲ್ಲದೆ ಇರುವುದರಿಂದ 63 ಲಕ್ಷಕ್ಕೂ ಅಧಿಕ ಮತ್ತು ಕೆಲವು ದಾಖಲೆಗಳ ಕೊರತೆಯಿಂದಾಗಿ 14 ಲಕ್ಷಕ್ಕೂ ಅಧಿಕ ವ್ಯಾಜ್ಯಗಳ ವಿಚಾರಣೆಯು ದೇಶದಲ್ಲಿ ನನೆಗುದಿಗೆ ಬಿದ್ದಿವೆ.

ರಾಷ್ಟ್ರೀಯ ನ್ಯಾಯಾಂಗ ಅಂಕಿ ಅಂಶ ಕೋಷ್ಠಕದ (ಎನ್‌ಜೆಡಿಜಿ) ಮಾಹಿತಿಗಳನ್ನು ಆಧರಿಸಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಶುಕ್ರವಾರ ಈ ಮಾತು ಹೇಳಿದರು.

ಆಂಧ್ರಪ್ರದೇಶ ನ್ಯಾಯಾಂಗ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ಅವರು, ನ್ಯಾಯಾಂಗದಲ್ಲಿ ಜಿಲ್ಲಾ ಕೋರ್ಟ್‌ಗಳು ‘ಕೆಳಹಂತದ ಕೋರ್ಟ್‘ ಎಂಬ ಮನಸ್ಥಿತಿಯಿಂದ ಜನತೆ ಮೊದಲು ಹೊರಬರಬೇಕು. ಜಿಲ್ಲಾ ಕೋರ್ಟ್‌ಗಳು ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬು. ಹಲವರಿಗೆ ಮೊದಲು ಮುಖಾಮುಖಿಯಾಗುವ ನ್ಯಾಯ ವ್ಯವಸ್ಥೆ ಎಂಬುದನ್ನು ಮನಗಾಣಬೇಕು ಎಂದರು.

ADVERTISEMENT

‘ಜಾಮೀನು ಹೊರತು ಬಂಧನವಲ್ಲ’ ಎಂಬುದು ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ನಿಯಮ. ಆದರೆ, ಈ ನಿಯಮಕ್ಕೆ ವಿರೋಧಾಭಾಸ ಎಂಬಂತೆ ಇಂದಿಗೂ ಅನೇಕ ಮಂದಿ ವಿಚಾರಾಣಾಧೀನ ಕೈದಿಗಳು ಜೈಲುಗಳಲ್ಲಿದ್ದಾರೆ’ ಎಂದು ವಿಷಾದಿಸಿದರು.

ಜಿಲ್ಲಾ ಕೋರ್ಟ್‌ಗಳಲ್ಲಿ ಸಿಆರ್‌ಪಿಸಿ ಸೆಕ್ಷನ್‌ 438 (ಜಾಮೀನು) ಅಥವಾ ಸೆಕ್ಷನ್ 439 (ಜಾಮೀನು ರದ್ದತಿ) ಎಂಬುದೇ ಅರ್ಥವಿಲ್ಲದ, ಯಾಂತ್ರಿಕವಾದ ಪ್ರಕ್ರಿಯೆ ಆಗಬಾರದು. ಕಡುಬಡವರ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಜಿಲ್ಲಾ ಕೋರ್ಟ್‌ಗಳ ಹಂತದಲ್ಲಿಯೇ ಪರಿಹಾರೋಪಾಯಗಳನ್ನು ಒದಗಿಸಲು ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.