ADVERTISEMENT

ಬೇಡಿಕೆ ಈಡೇರಿಸದಿದ್ದರೆ ಆಂದೋಲನ: ಸಂಯುಕ್ತ ಕಿಸಾನ್‌ ಮೋರ್ಚಾ

ಪಟ್ಟಿಯನ್ನು ಕೇಂದ್ರದ ಕೃಷಿ ಸಚಿವರಿಗೆ ಸಲ್ಲಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 18:09 IST
Last Updated 20 ಮಾರ್ಚ್ 2023, 18:09 IST
ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಸ್‌ಕೆಎಂ ಆಯೋಜಿಸಿದ್ದ ‘ಕಿಸಾನ್‌ ಮಹಾಪಂಚಾಯಿತಿ’ಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು --- – ಪಿಟಿಐ ಚಿತ್ರ
ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಎಸ್‌ಕೆಎಂ ಆಯೋಜಿಸಿದ್ದ ‘ಕಿಸಾನ್‌ ಮಹಾಪಂಚಾಯಿತಿ’ಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು --- – ಪಿಟಿಐ ಚಿತ್ರ   

ನವದೆಹಲಿ: ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸಲು ಕಾನೂನು ರೂಪಿಸುವುದು, ಸಾಲ ಮನ್ನಾ ಮತ್ತು ಪಿಂಚಣಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಇನ್ನೊಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಂಯುಕ್ತ ಕಿಸಾನ್‌ ಮೋರ್ಚಾವು (ಎಸ್‌ಕೆಎಂ) ಸರ್ಕಾರಕ್ಕೆ ಸೋಮವಾರ ನೀಡಿದೆ.

15 ಸದಸ್ಯರಿದ್ದ ರೈತರ ನಿಯೋಗವು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಕೃಷಿ ಭವನದಲ್ಲಿ ಭೇಟಿಯಾಗಿ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ ಎಂದು ರೈತ ನಾಯಕ ದರ್ಶನ್‌ ಪಾಲ್‌ ಹೇಳಿದ್ದಾರೆ.

‘ಪರಿಹಾರವಾಗದ ಹಲವು ಸಮಸ್ಯೆ ಗಳು ಇವೆ. ಇದಕ್ಕಾಗಿ ಇನ್ನೊಂದು ಆಂದೋಲನದ ಅಗತ್ಯ ಇದೆ. ಏಪ್ರಿಲ್‌ 30ರಂದು ದೆಹಲಿಯಲ್ಲಿ ಇನ್ನೊಂದು ಸಭೆ ನಡೆಸಲಿದ್ದೇವೆ. ರಾಜ್ಯಗಳಲ್ಲಿ ರ್‍ಯಾಲಿ ಗಳನ್ನು ನಡೆಸುವಂತೆ ರೈತ ಸಂಘಟನೆಗಳನ್ನು ಕೇಳಿಕೊಳ್ಳುತ್ತೇವೆ. ಸಭೆಗೂ ಮುನ್ನ ವಿವಿಧ ಸ್ಥಳಗಳಲ್ಲಿ ರೈತ ಪಂಚಾಯಿತಿ ನಡೆಸಬೇಕು’ ಎಂದು ರೈತರನ್ನು ಉದ್ದೇಶಿಸಿ ದರ್ಶನ್‌ ಪಾಲ್‌ ಹೇಳಿದ್ದಾರೆ.

ADVERTISEMENT

‘ನಮಗೆ ಪ್ರತಿಭಟನೆ ಬೇಕಿಲ್ಲ. ಆದರೆ ಅದು ಅನಿವಾರ್ಯ ಆಗುವಂತೆ ಮಾಡ ಲಾಗಿದೆ. ಸರ್ಕಾರವು ನಮ್ಮ ಬೇಡಿಕೆಗ
ಳನ್ನು ಈಡೇರಿಸದೇ ಇದ್ದರೆ ಆಂದೋಲನ ಆರಂಭಿಸುತ್ತೇವೆ. ಅದು ಈ ಹಿಂದೆ ಕೃಷಿ ಕಾಯ್ದೆಗಳ ವಿರುದ್ಧ ಮಾಡಿದ ಪ್ರತಿಭಟನೆ
ಗಿಂತಲೂ ಜೋರಾಗಿರುತ್ತದೆ’ ಎಂದು ರಾಮಲೀಲಾ ಮೈದಾನದಲ್ಲಿ ಸೇರಿದ್ದ ರೈತ ರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

ರೈತರಿಗೆ ನೀಡುವ ವಿದ್ಯುತ್‌ ಸಹಾಯ ಧನವನ್ನು ವಿದ್ಯುತ್ ಕಾಯ್ದೆಯಿಂದ ಹೊರಗೆ ಇರಿಸಲಾಗಿದೆ ಎಂದು ತೋಮರ್‌ ಅವರು ಹೇಳಿದ್ದಾರೆ. ಈ ಬೇಡಿಕೆ ಈಗಾಗಲೇ ಈಡೇರಿದೆ. ಇದು ನಮಗೆ ದೊಡ್ಡ ಗೆಲುವು ಎಂದು ದರ್ಶನ್‌ ಪಾಲ್‌ ಹೇಳಿದ್ದಾರೆ.

ಆಲಿಕಲ್ಲು ಮಳೆ ಮತ್ತು ಅಕಾಲಿಕ ಮಳೆಯಿಂದ ಆಗಿರುವ ಬೆಳೆಹಾನಿಗೆ ಪರಿಹಾರ ನೀಡಲು ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ತೋಮರ್ ಅವರು ರೈತರ ನಿಯೋಗಕ್ಕೆ ತಿಳಿಸಿದ್ದಾರೆ.

‘ಎಂಎಸ್‌ಪಿಗೆ ಕಾಯ್ದೆಯ ಖಾತರಿ ಕುರಿತಂತೆ ಸಚಿವರ ಜೊತೆಗೆ ನಿಯೋಗವು ಚರ್ಚಿಸಿದೆ. ರೈತರ ವಿರುದ್ಧ ದಾಖಲಿಸಲಾಗಿರುವ ಪ್ರಕರಣ
ಗಳನ್ನು ಕೈಬಿಡುವುದು ಮತ್ತು ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸುವುದಾಗಿ ತೋಮರ್ ಹೇಳಿದ್ದಾರೆ’ ಎಂದು ದರ್ಶನ್‌ ಪಾಲ್ ತಿಳಿಸಿದ್ದಾರೆ.

ಬೇಡಿಕೆಗಳೇನು?

l ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ

l ಸಂಪೂರ್ಣ ಸಾಲ ಮನ್ನಾ, ರೈತರಿಗೆ ಪಿಂಚಣಿ, ಬೆಳೆ ವಿಮೆ

l ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೈಬಿಡಬೇಕು

l ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಮೃತರಾದ ರೈತರ ಕುಟುಂಬಗಳಿಗೆ ಪರಿಹಾರ

l ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರನ್ನು ವಜಾ ಮಾಡಿ ಬಂಧಿಸಬೇಕು

l ಆಲಿಕಲ್ಲು ಮಳೆ ಮತ್ತು ಅಕಾಲಿಕ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ

l ವಿದ್ಯುತ್‌ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು

ರಾಮಲೀಲಾದಲ್ಲಿ ‘ಕಿಸಾನ್‌ ಪಂಚಾಯಿತಿ’

ಸಂಸತ್ತಿನಿಂದ ಐದು ಕಿಲೋಮೀಟರ್ ದೂರದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸಾವಿರಾರು ರೈತರು ಸೇರಿ ‘ಕಿಸಾನ್‌ ಪಂಚಾಯಿತಿ’ ನಡೆಸಿದ್ದಾರೆ. 2021ರ ಡಿಸೆಂಬರ್‌ನಲ್ಲಿ ನೀಡಿದ್ದ ಲಿಖಿತ ಭರವಸೆಗಳನ್ನು ಸರ್ಕಾರ ಈಗಲಾದರೂ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾದ ನೇತೃತ್ವದಲ್ಲಿ ರೈತರು ಇಲ್ಲಿ ಜಮಾವಣೆಗೊಂಡಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಸುಮಾರು ಒಂದು ವರ್ಷ ರೈತರು ದೆಹಲಿ ಗಡಿಗಳಲ್ಲಿ ನಡೆಸಿದ್ದ ಪ್ರತಿಭಟನೆಯ ನೇತೃತ್ವವನ್ನು ಕೂಡ ಎಸ್‌ಕೆಎಂ ವಹಿಸಿತ್ತು.

ಲಿಖಿತ ಒಪ್ಪಿಗೆ ಕೊಟ್ಟಿದ್ದರೂ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಜೈ ಕಿಸಾನ್‌ ಆಂದೋಲನದ ಅಧ್ಯಕ್ಷ ಅವಿಕ್‌ ಸಹಾ ಹೇಳಿದ್ದಾರೆ. ರೈತರ ಮೇಲೆ ಹಾಕಿರುವ ಸಾವಿರಾರು ಪ್ರಕರಣಗಳು ಬಾಕಿ ಇವೆ. ಇದಲ್ಲದೆ ಇನ್ನೂ ಹಲವು ಬೇಡಿಕೆಗಳು ಇವೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2021ರ ನವೆಂಬರ್‌ನಲ್ಲಿ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಾಗ ಎಂಎಸ್‌ಪಿಗೆ ಕಾಯ್ದೆಯ ಬಲ ನೀಡುವ ಭರವಸೆ ನೀಡಿದ್ದರು. ಈ ದಿಸೆಯಲ್ಲಿ ಕೆಲಸ ಮಾಡಲು ಸಮಿತಿಯೊಂದನ್ನು ರಚಿಸುವುದರ ಕುರಿತು ಕೃಷಿ ಸಚಿವಾಲಯವು ಅಧಿಸೂಚನೆಯನ್ನೂ ಕಳೆದ ವರ್ಷ ಹೊರಡಿಸಿತ್ತು. ರೈತರಿಗೆ ಎಂಎಸ್‌ಪಿ ದೊರೆಯುವುದಕ್ಕೆ ಬೇಕಾದ ಕ್ರಮಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ಸಮಿತಿಯಲ್ಲಿ ಮೂರು ಸ್ಥಾನಗಳನ್ನು ಎಸ್‌ಕೆಎಂ ಸದಸ್ಯರಿಗೆ ಮೀಸಲು ಇರಿಸಲಾಗಿತ್ತು. ಆದರೆ, ಸಮಿತಿಯ ಕಾರ್ಯಸೂಚಿಯಲ್ಲಿ ಎಂಎಸ್‌ಪಿ ಖಾತರಿಗೆ ಕಾಯ್ದೆ ತರುವ ಪ್ರಸ್ತಾಪವೇ ಇಲ್ಲ ಎಂದು ಈ ಸ್ಥಾನಗಳನ್ನು ಎಸ್‌ಕೆಎಂ ತಿರಸ್ಕರಿಸಿತ್ತು.

ಎಂಎಸ್‌ಪಿಗೆ ಕಾನೂನಿನ ಬಲ ಇಲ್ಲ. ಹಾಗಾಗಿ, ಎಂಎಸ್‌ಪಿ ತಮ್ಮ ಹಕ್ಕು ಎಂದು ರೈತರು ಕೇಳುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.