ADVERTISEMENT

ನದಿಗೆ ಸೇತುವೆ ನಿರ್ಮಿಸದಿದ್ದರೆ, ಮತ ಹಾಕಲ್ಲ: ರಿಜಿಜು ಕ್ಷೇತ್ರದ ಜನರ ಎಚ್ಚರಿಕೆ

ಕೇಂದ್ರ ಸಚಿವ ಕಿರಣ್‌ ರಿಜಿಜು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೂರು ಹಳ್ಳಿಗಳ ಜನರ ನಿರ್ಧಾರ

ಪಿಟಿಐ
Published 8 ಆಗಸ್ಟ್ 2023, 12:27 IST
Last Updated 8 ಆಗಸ್ಟ್ 2023, 12:27 IST
ಕಿರಣ್‌ ರಿಜಿಜು 
ಕಿರಣ್‌ ರಿಜಿಜು    

ಇಟಾನಗರ: ‘ನದಿಗೆ ಶಾಶ್ವತ ಸೇತುವೆಯನ್ನು ನಿರ್ಮಿಸದಿದ್ದರೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ. ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂದು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್‌ ಜಿಲ್ಲೆಯ ಮೂರು ಹಳ್ಳಿಗಳ ಗ್ರಾಮಸ್ಥರು ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಈ ಹಳ್ಳಿಗಳಿವೆ. ರಾಜ್ಯದ ಕೈಗಾರಿಕ ಸಚಿವ ತುಮ್ಕೆ ಬಾಗ್ರಾ ಸಹ ಈ ಹಳ್ಳಿಗಳನ್ನೊಳಗೊಂಡಿರುವ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

2014ರಿಂದಲೂ ಶಾಶ್ವತ ಸೇತುವೆಗಾಗಿ ಬೇಡಿಕೆ ಮಂಡಿಸುತ್ತಿದ್ದೇವೆ. ಇದೂವರೆಗೂ ಸ್ಪಂದನೆ ದೊರಕಿಲ್ಲ ಎಂದು 400 ಜನಸಂಖ್ಯೆ ಹಾಗೂ 300 ಮತದಾರರನ್ನು ಹೊಂದಿರುವ ರಿಮೆ ಮೊಕೊ, ಪಿಡಿ ರಿಮೆ, ಟೋಡಿ ರಿಮೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಸ್ತುತ ಸ್ಥಳೀಯರೇ ನಿರ್ಮಿಸಿಕೊಂಡು ಬಳಸುತ್ತಿರುವ 20 ಮೀಟರ್‌ ಉದ್ದದ ಮರದ ತಾತ್ಕಾಲಿಕ ಸೇತುವೆಯೊಂದಿದೆ. ಆದರೆ ಇದು ಮಳೆಗಾಲದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಪಿಸಾಮ್ ನದಿಯ ಉಪ ನದಿ ಹಿಜುಮ್‌ನಲ್ಲಿನ ನೀರಿನ ಹರಿವು ಸೇತುವೆಯನ್ನು ಸದಾ ಮುಳುಗಿಸಿರುತ್ತದೆ.

ಸೂಕ್ತ ರಸ್ತೆ ಸಂಪರ್ಕ ಇಲ್ಲದಿರುವುದು ಮೂರು ಹಳ್ಳಿಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮೇಲೆಯೂ ಪರಿಣಾಮ ಬೀರಿದೆ. ಗ್ರಾಮಸ್ಥರು ಈ ಬಗ್ಗೆ ಒಟ್ಟಾಗಿ ಚರ್ಚಿಸಿದ್ದು, ಪಿಡಿ ರಿಮೆ ಗ್ರಾಮದಿಂದ ಹಿಜುಮ್ ನದಿಯವರೆಗೂ ಸರ್ವ ಋತು ರಸ್ತೆ ನಿರ್ಮಿಸಬೇಕು ಹಾಗೂ ನದಿಗೆ ಶಾಶ್ವತ ಸೇತುವೆಯನ್ನು ನಿರ್ಮಿಸಲು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ ಈ ಹಳ್ಳಿಗಳ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

‘ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ವಿಫಲವಾಗಿದೆ. ಸೌಲಭ್ಯಕ್ಕಾಗಿ ಪ್ರಜಾಸತ್ತಾತ್ಮಕ ಆಂದೋಲನ ರೂಪಿಸುತ್ತೇವೆ. ಇದಕ್ಕೂ ಸ್ಪಂದನೆ ಸಿಗದಿದ್ದರೆ ಸಂಸತ್ತು ಹಾಗೂ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’ ಎಂದು ರಿಮೆ ಮೊಕೊ ಗ್ರಾಮದ ಮುಖಂಡ ಗ್ಯಾಂಬೀನ್ ರಿಮೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.