ADVERTISEMENT

ಉಚಿತ ಕೊಡುಗೆಗಳಿಂದ ಬಡತನ ನಿರ್ಮೂಲನೆ ಅಸಾಧ್ಯ: ನಾರಾಯಣ ಮೂರ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2025, 12:58 IST
Last Updated 13 ಮಾರ್ಚ್ 2025, 12:58 IST
<div class="paragraphs"><p>ಎನ್.ಆರ್.ನಾರಾಯಣ</p></div>

ಎನ್.ಆರ್.ನಾರಾಯಣ

   

(ಪಿಟಿಐ ಚಿತ್ರ)

ನವದೆಹಲಿ: ಕೇವಲ ಉಚಿತ ಕೊಡುಗೆಗಳನ್ನು ನೀಡುವುದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಅಸಾಧ್ಯ. ಬದಲಿಗೆ ಉದ್ಯೋಗ ಸೃಷ್ಟಿ ಬಡತನವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿದ್ದಾರೆ.

ADVERTISEMENT

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳನ್ನು ಸೃಷ್ಟಿಸಲು ಸಾಧ್ಯವಾದರೆ, ಬೆಳಗ್ಗಿನ ಬಿಸಿಲಿಗೆ ಇಬ್ಬನಿ ಮಾಯವಾದಂತೆ ಬಡತನವೂ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.

'ನೀವು ಪ್ರತಿಯೊಬ್ಬರೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಆದರೆ ನೀವು ಬಡತನದ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ ಎಂಬುವುದು ಮುಖ್ಯ. ಉಚಿತ ಕೊಡುಗೆಗಳು ಬಡತನ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಇದುವರೆಗೂ ಉಚಿತ ಕೊಡುಗೆಗಳನ್ನು ಕೊಟ್ಟಿರುವ ಯಾವ ದೇಶವೂ ಬಡತನದಿಂದ ಹೊರಬಂದಿಲ್ಲ. ಬದಲಿಗೆ ನಾವು ಹೆಚ್ಚು ಉದ್ಯಮಗಳನ್ನು ಸೃಷ್ಟಿಸಬೇಕು' ಎಂದಿದ್ದಾರೆ. ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.

ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲಲು ಉಚಿತ ಕೊಡುಗೆಗಳನ್ನು ನೀಡುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವ ವೇಳೆಯೇ ನಾರಾಯಣ ಮೂರ್ತಿ ಅವರ ಈ ಹೇಳಿಕೆ ಮುನ್ನೆಲೆಗೆ ಬಂದಿದೆ.

ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಕಳೆದ ವರ್ಷ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಪರ–ವಿರೋಧ ಚರ್ಚೆಗಳು ನಡೆದಿದ್ದವು.

ಉಚಿತ ಕೊಡುಗೆಗಳ ಕುರಿತು ಸುಪ್ರೀಂ ಕೋರ್ಟ್ ಅಸಮಧಾನ

ಚುನಾವಣೆಗೆ ಮೊದಲು ‘ಉಚಿತ ಕೊಡುಗೆಗಳನ್ನು’ ಘೋಷಿಸುವ ರಾಜಕೀಯ ಪಕ್ಷಗಳ ಬಗ್ಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿತ್ತು. ದೇಶದ ಅಭಿವೃದ್ಧಿಗಾಗಿ ಜನರನ್ನು ಮುಖ್ಯವಾಹಿನಿಗೆ ತರುವ ಬದಲು, ‘ಪರಾವಲಂಬಿ ವರ್ಗವೊಂದನ್ನು ಸೃಷ್ಟಿಸುವ ಕೆಲಸ ಆಗುತ್ತಿದೆಯಲ್ಲವೇ’ ಎಂದು ಕೋರ್ಟ್‌ ಪ್ರಶ್ನಿಸಿತ್ತು.

ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುವುದು ಹೆಚ್ಚು ಉತ್ತಮ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.