ADVERTISEMENT

ಧಾರ್ಮಿಕ ಸ್ಥಳಗಳ ಕುರಿತ ಯಾವುದೇ ಆದೇಶ ನೀಡದಂತೆ ಕೋರ್ಟ್‌ಗಳಿಗೆ ‘ಸುಪ್ರೀಂ’ನಿರ್ಬಂಧ

ಪಿಟಿಐ
Published 12 ಡಿಸೆಂಬರ್ 2024, 12:49 IST
Last Updated 12 ಡಿಸೆಂಬರ್ 2024, 12:49 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಧಾರ್ಮಿಕ ಸ್ಥಳಗಳು, ವಿಶೇಷವಾಗಿ ಮಸೀದಿಗಳು ಮತ್ತು ದರ್ಗಾಗಳನ್ನು ತಮ್ಮ ಸುಪರ್ದಿಗೆ ನೀಡಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತಂತೆ ಯಾವುದೇ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸದಂತೆ ದೇಶದ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ತನ್ನ ಮುಂದಿನ ನಿರ್ದೇಶನದವರೆಗೆ ಕಾಯುವಂತೆ ಕೆಳ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.

‘ಧಾರ್ಮಿಕ ಸ್ಥಳಗಳ ಕುರಿತ ವಿಷಯ ವಿಚಾರಣೆಯಲ್ಲಿದ್ದು, ಈ ಬಗ್ಗೆ ನಾವು ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗಿ, ಮುಂದಿನ ಆದೇಶದವರೆಗೂ ಯಾವುದೇ ಹೊಸ ಪ್ರಕರಣಗಳ ವಿಚಾರಣೆ ಮತ್ತು ಆದೇಶ ನೀಡಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಅವರನ್ನೂ ಒಳಗೊಂಡ ಪೀಠ ಹೇಳಿದೆ.

ADVERTISEMENT

ವಾರಾಣಸಿಯ ಗ್ಯಾನವಾಪಿ, ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್‌ನ ಶಾಹಿ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳ ಮೂಲ ಧಾರ್ಮಿಕ ಸ್ವರೂಪವನ್ನು ಪರಿಶೀಲಿಸುವಂತೆ ವಿವಿಧ ಹಿಂದೂ ಅರ್ಜಿದಾರರು ಸಲ್ಲಿಸಿರುವ ಸುಮಾರು 18 ಮೊಕದ್ದಮೆಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ನಿರ್ಬಂಧಿಸಿದೆ.

1991ರ ಪೂಜಾ ಸ್ಥಳಗಳ ಕಾಯ್ದೆಯ ವಿವಿಧ ಅಂಶಗಳನ್ನು ಪ್ರಶ್ನಿಸಿ ವಕೀಲರಾದ ಅಶ್ವಿನಿ ಉಪಾಧ್ಯಾಯ್‌ ಸೇರಿದಂತೆ 6 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಯಾವುದೇ ಪೂಜಾ ಸ್ಥಳಗಳ ಪರಿವರ್ತನೆಗೆ 1991ರ ಕಾನೂನು ನಿರ್ಬಂಧ ಹೇರಿದ್ದು, 1947ರ ಆಗಸ್ಟ್ 15ರಂದು ಇದ್ದಂತೆಯೇ ಪೂಜಾ ಸ್ಥಳದ ಯಥಾಸ್ಥಿತಿ ಕಾಪಾಡಬೇಕು ಎಂದು ಹೇಳಿದೆ.

1991ರ ಕಾನೂನಿನ ಕಠಿಣ ಜಾರಿಗೆ ಹಲವರು ಕೋರಿದ್ದು, ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಈ ವ್ಯಾಪ್ತಿಯಿಂದ ರಾಮ ಜನ್ಮಭೂಮಿ–ಬಾಬರಿ ಮಸೀದಿ ಕುರಿತ ಪ್ರಕರಣವನ್ನು ಹೊರಗಿಡಲಾಗಿದೆ.

1991ರ ಕಾನೂನಿನ ಮಾನ್ಯತೆ, ವ್ಯಾಪ್ತಿಯನ್ನು ಪರಿಶೀಲಿಸುವುದಾಗಿ ಪೀಠವು ಸ್ಪಷ್ಟಪಡಿಸಿದೆ. ಈ ಕುರಿತಂತೆ ಯಾವುದೇ ಮುಂದಿನ ಆದೇಶ ನೀಡುವವರೆಗೆ ಈ ಕುರಿತ ಪ್ರಕರಣಗಳ ವಿಚಾರಣೆಯಿಂದ ದೂರವಿರಿ ಎಂದು ಇತರ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.