ADVERTISEMENT

ಆಹಾರ ಮಾರಾಟಗಾರರ ವಿವರ ಪ್ರಕಟ ‘ನಿರ್ಧಾರ’ ಕೈಬಿಟ್ಟ ಹಿಮಾಚಲ ಪ್ರದೇಶ

ಪಿಟಿಐ
Published 26 ಸೆಪ್ಟೆಂಬರ್ 2024, 13:52 IST
Last Updated 26 ಸೆಪ್ಟೆಂಬರ್ 2024, 13:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರಕೃಪೆ: iStock Photos

ಶಿಮ್ಲಾ: ‘ರಾಜ್ಯದಲ್ಲಿ ಆಹಾರ, ತಿನಿಸು ಮಾರಾಟಗಾರರು ಅಂಗಡಿಗಳ ಎದುರು ಕಡ್ಡಾಯವಾಗಿ ಗುರುತು ವಿವರ ಪ್ರಕಟಿಸಬೇಕು ಎಂದು ತೀರ್ಮಾನಿಸಿಲ್ಲ’ ಎಂದು ಹಿಮಾಚಲ ಪ್ರದೇಶ ಸರ್ಕಾರ ಪ್ರಕಟಿಸಿದೆ.

ADVERTISEMENT

ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರು ಬುಧವಾರ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧಪಕ್ಷಗಳಿಂದ ತೀವ್ರ ಆಕ್ಷೇಪ‍ ವ್ಯಕ್ತವಾದ ಹಿಂದೆಯೇ ಸರ್ಕಾರ ಈ ಸ್ಪಷ್ಟನೆ ನೀಡಿದೆ.

‘ಬೀದಿ ಬದಿಯ ಮಾರಾಟಗಾರರು ಮುಖ್ಯವಾಗಿ ಆಹಾರ, ತಿನಿಸುಗಳನ್ನು ಮಾರುವವರು ತಮ್ಮ ಗುರುತು, ವಿವರಗಳಿರುವ ಫಲಕವನ್ನು ಅಂಗಡಿ ಎದುರು ಪ್ರಕಟಿಸುವುದು ಕಡ್ಡಾಯ’ ಎಂದು ಸಿಂಗ್ ಹೇಳಿದ್ದರು.

ಉತ್ತರ ಪ್ರದೇಶದ ಸರ್ಕಾರವು ಕೈಗೊಂಡಿರುವ ನಿರ್ಧಾರದ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಈ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಹೇಳಿದ್ದರು. 

ಸಚಿವರು ತಮ್ಮ ನಿಲುವನ್ನು ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದ ಬಳಿಕ ‘ಇಂಡಿಯಾ’ ಮೈತ್ರಿಕೂಟದ ಹಲವು ಮುಖಂಡರು ತೀವ್ರವಾಗಿ ವಿರೋಧಿಸಿದ್ದರು.

ಆದರೆ, ರಾಜ್ಯದ ವಿರೋಧಪಕ್ಷದ ನಾಯಕ, ಬಿಜೆಪಿ ಮುಖಂಡ ಜೈರಾಮ್ ಠಾಕೂರ್ ಅವರು, ‘ಸಚಿವ ಸಿಂಗ್ ಅವರು ತಮ್ಮ ನಿಲುವಿಗೆ ಬದ್ಧರಾಗಿರಬೇಕು’ ಎಂದು ಒತ್ತಾಯಿಸಿದ್ದರು.

ಬೀದಿ ಬದಿ ಮಾರಾಟಗಾರರಿಗೆ ಅನ್ವಯಿಸುವಂತೆ ನೀತಿ ರೂಪಿಸಲು ಕಳೆದ ವಾರ ವಿಧಾನಸಭೆ ಸ್ಪೀಕರ್ ಕುಲದೀಪ್‌ ಸಿಂಗ್ ಪಥಾನಿಯ ಅವರು, ಕೈಗಾರಿಕ ಸಚಿವರ ನೇ‌ತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿದ್ದರು.

ಕಳೆದ ವಾರ ಮಸೀದಿಯೊಂದರ ಅನಧಿಕೃತ ನಿರ್ಮಾಣದ ಭಾಗದ ನೆಲಸಮ ಕಾರ್ಯಾಚರಣೆ ವೇಳೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ, ಹೊರಗಿನ ಕಾರ್ಮಿಕರ ವಿವರ ನೋಂದಣಿಗೆ ತೀರ್ಮಾನಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಆಹಾರಗಳಿಗೆ ಉಗುಳುವ, ಮೂತ್ರ ಮಿಶ್ರಣ ಮಾಡಿದ್ದ ಕೆಲ ನಿದರ್ಶನಗಳನ್ನು ಉಲ್ಲೇಖಿಸಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಆಹಾರ ತಿನಿಸುಗಳ ಮಾರಾಟಗಾರರು, ಮಾಲೀಕರು, ವ್ಯವಸ್ಥಾಪಕರು ಅಂಗಡಿ ಎದುರು ಕಡ್ಡಾಯವಾಗಿ ತಮ್ಮ ವಿವರ ಪ್ರಕಟಿಸಬೇಕು’ ಎಂದು ಆದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.