ADVERTISEMENT

ಸುನಂದಾ ಸಾವಿನ ಪ್ರಕರಣ: ಆರೋಪ ಕೈಬಿಡಲು ತರೂರ್‌ ಕೋರಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 16:13 IST
Last Updated 18 ಮಾರ್ಚ್ 2021, 16:13 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ (ಪಿಟಿಐ): ತಮ್ಮ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಈ ಪ್ರಕರಣದಲ್ಲಿ ತನಿಖೆ ನಡೆಸಿ ವರದಿ ನೀಡಿರುವ ವಿವಿಧ ತಜ್ಞರು ಸುನಂದಾ ಸಾವಿಗೆ ಕಾರಣವೇನೆಂಬುದರ ಬಗ್ಗೆ ಖಚಿತ ಅಭಿಪ್ರಾಯ ನೀಡಿಲ್ಲ. ಹಾಗಾಗಿ ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಗುರುವಾರ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ತರೂರ್‌ ವಿರುದ್ಧ ಐಪಿಸಿ ಸೆಕ್ಷನ್ 498ಎ (ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು) ಹಾಗೂ ಐಪಿಸಿ 306 (ಆತ್ಮಹತ್ಯೆಗೆ ಪ್ರಚೋದಿಸುವುದು) ಸಾಬೀತಾಗುವ ಯಾವುದೇ ಪುರಾವೆಗಳಿಲ್ಲ. ಸುನಂದಾ ಸಾವನ್ನು ಆಕಸ್ಮಿಕವೆಂದು ಪರಿಗಣಿಸಬೇಕು ಎಂದು ಪಹ್ವಾ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

‘ಈ ಪ್ರಕರಣದ ತನಿಖಾಧಿಕಾರಿ ಮುಂದೆ ತಜ್ಞರು ಸಾಕಷ್ಟು ವರದಿಗಳನ್ನು ಸಲ್ಲಿಸಿದ್ದಾರೆ. ಆದರೆ ಸಾವಿಗೆ ಕಾರಣವೇನೆಂದು ಯಾವುದೇ ನಿರ್ದಿಷ್ಟ ಅಭಿಪ್ರಾಯವನ್ನು ತಜ್ಞರು ನೀಡಿಲ್ಲ’ ಎಂದು ಪಹ್ವಾ ಬುಧವಾರ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರ ಗಮನಕ್ಕೆ ತಂದಿದ್ದರು.

ADVERTISEMENT

ಪ್ರಕರಣದ ವಾದ ಪ್ರತಿವಾದಗಳು ಸುದೀರ್ಘವಾಗಿ ನಡೆಯುತ್ತಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 23 ನ್ಯಾಯಾಲಯ ಪುನರಾರಂಭಿಸಲಿದೆ.

ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಶಿ ತರೂರ್‌ ಅವರಿಗೆ 2018ರ ಜುಲೈ 5ರಂದು ಜಾಮೀನು ಸಿಕ್ಕಿದೆ.

2014ರ ಜನವರಿ 17ರಂದು ಸುನಂದಾ ಪುಷ್ಕರ್‌ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶಶಿ ತರೂರ್‌ ಅವರ ಅಧಿಕೃತ ಬಂಗಲೆ ನವೀಕರಣ ನಡೆಯುತ್ತಿದ್ದರಿಂದ ದಂಪತಿ ಹೋಟೆಲ್‌ನಲ್ಲಿ ತಂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.