
ನವದೆಹಲಿ: ಭಾರತೀಯ ವಾಯುಪಡೆಯಲ್ಲಿ (ಐಎಎಫ್) ‘ಶಾರ್ಟ್ ಸರ್ವಿಸ್ ಕಮಿಷನ್’ನ (ಎಸ್‌ಎಸ್‌ಸಿ) ಮಹಿಳಾ ಅಧಿಕಾರಿಗಳನ್ನು ‘ಪರ್ಮನೆಂಟ್ ಕಮಿಷನ್’ಗೆ ಮಂಜೂರು ಮಾಡುವಲ್ಲಿ ತಾರತಮ್ಯ ಮತ್ತು ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
2019ರಿಂದ 243 ಪುರುಷ ಮತ್ತು 177 ಮಹಿಳಾ ಅಧಿಕಾರಿಗಳನ್ನು ‘ಪರ್ಮನೆಂಟ್ ಕಮಿಷನ್’ಗೆ ಕಳುಹಿಸಲಾಗಿದೆ ಎಂದು ಅದು ತಿಳಿಸಿದೆ.
‘ಪರ್ಮನೆಂಟ್ ಕಮಿಷನ್’ ಪ್ರವೇಶ ನಿರಾಕರಣೆಯನ್ನು ಪ್ರಶ್ನಿಸಿ ಕೆಲ ಎಸ್‌ಎಸ್‌ಸಿ ಮಹಿಳಾ ಅಧಿಕಾರಿಗಳ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್, ಎನ್. ಕೋಟೀಶ್ವರ್ ಸಿಂಗ್ ಅವರ ಪೀಠ ವಿಚಾರಣೆ ನಡೆಸಿತು.
2022ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದ ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಮೂಲಕ ಐಎಎಫ್ ಮಹಿಳಾ ಅಧಿಕಾರಿಗಳ ಸೇರ್ಪಡೆ ಪ್ರಾರಂಭಿಸಿತು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಪೀಠಕ್ಕೆ ಮಾಹಿತಿ ನೀಡಿದರು.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಧಿಕಾರಿಗಳನ್ನು ‘ಪರ್ಮನೆಂಟ್ ಕಮಿಷನ್’ಕ್ಕೆ ಕಳುಹಿಸಲಾಗುತ್ತದೆ. ಕಾರ್ಯಕ್ಷಮತೆಗೆ ಸಂಬಂಧಿಸಿದ ಕನಿಷ್ಠ ಮಾನದಂಡಗಳನ್ನು ಪೂರೈಸದ ಅಥವಾ ಆಯಾ ಶಾಖೆಗಳಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಅರ್ಹತೆ ಪಡೆಯಲು ಸಾಧ್ಯವಾಗದ ಕಾರಣ ಕೆಲ ಅಧಿಕಾರಿಗಳನ್ನು ಅದರ ವ್ಯಾಪ್ತಿಗೆ ತಂದಿಲ್ಲ ಎಂದು ಅವರು ವಿವರಿಸಿದರು.
ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ‘ಐಎಎಫ್‌ನಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗಕ್ಕೆ ಮಂಜೂರು ಮಾಡುವಲ್ಲಿ ತಾರತಮ್ಯವಿದೆ. ಅದು ನ್ಯಾಯಯುತವಾಗಿ ನಡೆಯುತ್ತಿಲ್ಲ’ ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿ ಪೀಠವು, ಇದೇ 19ರೊಳಗೆ ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ಸೂಚಿಸಿತು.
ಎಸ್‌ಎಸ್‌ಸಿ ಅಧಿಕಾರಿಗಳು 10 ಅಥವಾ 15 ವರ್ಷಗಳವರೆಗೆ ಸಶಸ್ತ್ರ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ‘ಪರ್ಮನೆಂಟ್ ಕಮಿಷನ್’ಗೆ ಮಂಜೂರಾಗುವ ಅಧಿಕಾರಿಗಳು ನಿವೃತ್ತಿ (60 ವರ್ಷ) ಆಗುವ ತನಕ ಸೇವೆ ಸಲ್ಲಿಸಬಹುದು, ಅಲ್ಲದೆ ಬಡ್ತಿಗಳನ್ನು ಪಡೆಯಲು ಮತ್ತು ಉನ್ನತ ದರ್ಜೆಯ ಅಧಿಕಾರಿಗಳಾಗಲೂ ಅವಕಾಶ ಇರುತ್ತದೆ. ಜತೆಗೆ ನಿವೃತ್ತಿ ನಂತರದ ಸವಲತ್ತುಗಳು ದೊರೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.