ADVERTISEMENT

ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರಲಿಲ್ಲ: ಕರಣ್ ಜೋಹರ್

ಎನ್‌ಸಿಬಿ ನೋಟಿಸ್‌ಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಿರ್ದೇಶಕ

ಪಿಟಿಐ
Published 18 ಡಿಸೆಂಬರ್ 2020, 10:57 IST
Last Updated 18 ಡಿಸೆಂಬರ್ 2020, 10:57 IST
ಕರಣ್ ಜೋಹರ್
ಕರಣ್ ಜೋಹರ್   

ಮುಂಬೈ: ‘2019ರಲ್ಲಿ ನನ್ನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಯಾವುದೇ ರೀತಿಯ ಮಾದಕ ವಸ್ತುವನ್ನು (ಡ್ರಗ್ಸ್‌) ಸೇವಿಸಿರಲಿಲ್ಲ’ ಎಂದು ಬಾಲಿವುಡ್‌ನ ಸಿನಿಮಾ ನಿರ್ದೇಶಕ ಕರಣ್ ಜೋಹರ್, ಶುಕ್ರವಾರ ಮಾದಕ ವಸ್ತು ನಿಗ್ರಹ ದಳದ (ಎನ್‌ಸಿಬಿ) ನೋಟಿಸ್‌ಗೆ ಪ್ರತಿಕ್ರಿಯಿಸಿದ್ದಾರೆ.

‘ಕರಣ್ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸುತ್ತಿರುವುದನ್ನು ತೋರಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದ್ದರಿಂದ ಎನ್‌ಸಿಬಿ ಕರಣ್ ಜೋಹರ್‌ಗೆ ನೋಟಿಸ್ ನೀಡಿತ್ತು’ ಎಂದು ಎನ್‌ಸಿಬಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ವಿಡಿಯೊಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಗೆ ದೂರು ಕೂಡ ಬಂದಿತ್ತು. ಪಾರ್ಟಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ನೀಡುವಂತೆ ಎನ್‌ಸಿಬಿ ನೋಟಿಸ್‌ನಲ್ಲಿ ಕೇಳಿತ್ತು. ಈ ಪಾರ್ಟಿಯಲ್ಲಿ ಬಾಲಿವುಡ್‌ನ ದೊಡ್ಡ ತಾರೆಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಯಾವುದೇ ರೀತಿಯ ಡ್ರಗ್ಸ್ ಸೇವಿಸಿಲ್ಲ ಎಂದು ನೋಟಿಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕರಣ್ ಜೋಹರ್ ಸ್ಪಷ್ಟಪಡಿಸಿದ್ದಾರೆ’ ಎಂದೂ ಅಧಿಕಾರಿ ಹೇಳಿದ್ದಾರೆ.

ADVERTISEMENT

ಶಿರೋಮಣಿ ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಸಿರ್ಸಾ ಅವರು ಈ ವಿಡಿಯೊವನ್ನು ಎನ್‌ಸಿಬಿಯ ಮುಂಬೈ ಘಟಕಕ್ಕೆ ನೀಡಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲ, ಈ ಬಗ್ಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಮುಂಬೈ ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಈ ಬಗ್ಗೆ ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ ಎನ್ನಲಾಗಿದೆ.

ವಿಡಿಯೊ ವೈರಲ್ ಆದ ನಂತರ ಕರಣ್ ಜೋಹರ್, ‘ಪಾರ್ಟಿಯ ಡ್ರಗ್ಸ್ ಸೇವನೆಯ ವರದಿಗಳು ಅಪಪ್ರಚಾರ ಮತ್ತು ದುರುದ್ದೇಶದಿಂದ ಕೂಡಿವೆ’ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.