ADVERTISEMENT

ಬಿಹಾರ: ಹಿಂಸಾತ್ಮಕ ಪ್ರತಿಭಟನೆ, ಗಲಾಟೆಯಲ್ಲಿ ಭಾಗವಹಿಸಿದರೆ ಸರ್ಕಾರಿ ಉದ್ಯೋಗವಿಲ್ಲ

ಏಜೆನ್ಸೀಸ್
Published 3 ಫೆಬ್ರುವರಿ 2021, 12:53 IST
Last Updated 3 ಫೆಬ್ರುವರಿ 2021, 12:53 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ಇನ್ನು ಮುಂದೆ ಬಿಹಾರದಲ್ಲಿ ನೀವು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿರಬಾರದು. ಅಲ್ಲದೆ, ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಬಾರದು ಎನ್ನುವ ಸುತ್ತೋಲೆಯೊಂದನ್ನು ಬಿಹಾರ ಪೊಲೀಸರು ಹೊರಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.

ಬಿಹಾರ ಪೊಲೀಸ್ ಸುತ್ತೋಲೆ ಕುರಿತು ಪ್ರತಿಪಕ್ಷಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ್ದು, ಅವರು ಹಿಟ್ಲರ್, ಮುಸಲೋನಿಯಂತೆ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಹಾರ ಡಿಜಿಪಿ ಎಸ್‌.ಕೆ. ಸಿಂಘಾಲ್ ಮಂಗಳವಾರ ಹೊರಡಿಸಿರುವ ಸುತ್ತೋಲೆ ಪ್ರಕಾರ, ಬಿಹಾರದಲ್ಲಿ ಸರ್ಕಾರಿ ಕೆಲಸ ಪಡೆಯಲು ಗುಣನಡತೆ ಪ್ರಮಾಣಪತ್ರ ಕಡ್ಡಾಯವಾಗಲಿದೆ. ಅಲ್ಲದೆ, ಯಾವುದೇ ರೀತಿಯ ಹಿಂಸಾತ್ಮಕ ಪ್ರತಿಭಟನೆ, ಗುಂಪು ಗಲಭೆ, ರಸ್ತೆಯಲ್ಲಿ ಬಂದ್ ಮಾಡುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಅಂಥವರು ಸರ್ಕಾರಿ ಉದ್ಯೋಗ ಪಡೆಯಲು ಅನರ್ಹರಾಗಿರುತ್ತಾರೆ.

ADVERTISEMENT

ಬಿಹಾರದಲ್ಲಿ ಸರ್ಕಾರಿ ಮದ್ಯದಂಗಡಿ, ಸರ್ಕಾರಿ ಕೆಲಸ, ಪಾಸ್‌ಪೋರ್ಟ್ ಪಡೆಯಲು ಪೊಲೀಸ್ ದೃಢೀಕರಣ ಕಡ್ಡಾಯವಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಕೂಡ ಇದೇ ಮಾದರಿಯ ನಿಯಮ ಜಾರಿಗೆ ತಂದಿತ್ತು. ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗವಹಿಸುವಿಕೆ, ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟು ಮಾಡುವವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂಬ ನಿಯಮವನ್ನು ಕಾನೂನಿನಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.