ADVERTISEMENT

ಭಯೋತ್ಪಾದನೆ ಪೋಷಿಸುವುದರಲ್ಲಿ ಪಾಕ್‌ ಮುಂಚೂಣಿಯಲ್ಲಿದೆ: ಎಸ್‌.ಜೈಶಂಕರ್‌ ಟೀಕೆ

ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಟೀಕೆ

ಪಿಟಿಐ
Published 2 ಅಕ್ಟೋಬರ್ 2022, 11:23 IST
Last Updated 2 ಅಕ್ಟೋಬರ್ 2022, 11:23 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ವಡೋದರ: ‘ಭಯೋತ್ಪಾದನೆ ಪೋಷಿಸುವುದರಲ್ಲಿ ಪಾಕಿಸ್ತಾನವು ಇತರ ರಾಷ್ಟ್ರಗಳಿಗಿಂತಲೂ ಮುಂಚೂಣಿಯಲ್ಲಿದೆ. ಭಾರತವು ಮಾಹಿತಿ ತಂತ್ರಜ್ಞಾನದ (ಐಟಿ) ಮೂಲಕ ಗುರುತಿಸಿಕೊಂಡಿದ್ದರೆ, ಪಾಕಿಸ್ತಾನವು‌ ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಹೆಸರುವಾಸಿಯಾಗಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಟೀಕಿಸಿದ್ದಾರೆ.

ಇಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ‘ರೈಸಿಂಗ್‌ ಇಂಡಿಯಾ ಆ್ಯಂಡ್‌ ವರ್ಲ್ಡ್‌: ಫಾರಿನ್‌ ಪಾಲಿಸಿ ಇನ್‌ ಮೋದಿ ಎರಾ’ ವಿಷಯದ ಕುರಿತು ಮಾತನಾಡಿದರು.

‘ಪಾಕಿಸ್ತಾನದಂತೆ ಬೇರೆ ಯಾವ ರಾಷ್ಟ್ರವೂ ಭಯೋತ್ಪಾದನೆ ಉತ್ತೇಜಿಸುತ್ತಿಲ್ಲ. ಭಯೋತ್ಪಾದನೆಗೆ ಕಡಿವಾಣ ಹಾಕದಿದ್ದರೆ ಮುಂದೊಂದು ದಿನ ಅದು ತಮಗೇ ಮುಳುವಾಗುತ್ತದೆ ಎಂಬುದು ಇತರೆ ರಾಷ್ಟ್ರಗಳಿಗೆ ಮನವರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಕೈಗೊಂಡಿರುವ ರಾಜತಾಂತ್ರಿಕ ನಿಲುವುಗಳು ಇದಕ್ಕೆ ಕಾರಣ’ ಎಂದಿದ್ದಾರೆ.

ADVERTISEMENT

‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತನ್ನೇ ಜೊತೆಗೆ ಕರೆದೊಯ್ಯುವಲ್ಲಿ ಭಾರತವು ಬಹುತೇಕ ಯಶಸ್ವಿಯಾಗಿದೆ. ಈ ಮೊದಲು ಹಲವು ರಾಷ್ಟ್ರಗಳು ಭಯೋತ್ಪಾದನೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದವು. ಅದರಿಂದ ತಮಗೆ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ ಎಂದು ಭಾವಿಸಿದ್ದವು. ಆದರೆ ಈಗ ಆ ರಾಷ್ಟ್ರಗಳೆಲ್ಲಾ ಭಯೋತ್ಪಾದನೆ ನಿಗ್ರಹಿಸಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಇದು ನಮ್ಮ ರಾಜತಾಂತ್ರಿಕತೆಗೆ ಸಾಕ್ಷಿ’ ಎಂದೂ ಹೇಳಿದ್ದಾರೆ.

‘ಬಾಂಗ್ಲಾದೇಶದೊಂದಿಗಿನ ಕಾರ್ಯತಂತ್ರದ ಒಪ್ಪಂದದಿಂದಾಗಿ ದೇಶದ ಈಶಾನ್ಯ ಭಾಗಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿವೆ. ಬಾಂಗ್ಲಾ ಜೊತೆಗಿನ ಭೂ ಗಡಿ ಒಪ್ಪಂದದಿಂದಾಗಿ ಗಡಿಯಲ್ಲಿ ಆಶ್ರಯ ಪಡೆಯಲು ಉಗ್ರರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಭಯೋತ್ಪಾದನಾ ಕೃತ್ಯಗಳಿಗೂ ಕಡಿವಾಣ ಬಿದ್ದಿದೆ’ ಎಂದು ತಿಳಿಸಿದ್ದಾರೆ.

‘ದೇಶ ವಿಭಜನೆಯು ದೊಡ್ಡ ದುರಂತ. ಅದರಿಂದಾಗಿಯೇ ಭಯೋತ್ಪಾದನೆಯಂತಹ ಹಲವು ಸಮಸ್ಯೆಗಳು ಸೃಷ್ಟಿಯಾದವು’ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.