ADVERTISEMENT

ಉಗ್ರರಿಗೆ ಪಾಕ್‌ ನೆಲ ಬಳಸಲು ಬಿಡಲ್ಲ: ಇಮ್ರಾನ್ ಖಾನ್

ಪಿಟಿಐ
Published 9 ಮಾರ್ಚ್ 2019, 16:53 IST
Last Updated 9 ಮಾರ್ಚ್ 2019, 16:53 IST
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಇಮ್ರಾನ್
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಇಮ್ರಾನ್   

ಇಸ್ಲಾಮಾಬಾದ್ : ಪಾಕಿಸ್ತಾನದ ನೆಲವನ್ನುಬಳಸಿಕೊಂಡು ಬೇರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯಾವುದೇ ಉಗ್ರ ಸಂಘಟನೆಗಳು ಅಥವಾ ವ್ಯಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಹೆಚ್ಚುತ್ತಿರುವ ಜಾಗತಿಕ ಒತ್ತಡದ ಬೆನ್ನಲ್ಲೇ ಇಮ್ರಾನ್‌ ಖಾನ್ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಇಮ್ರಾನ್, ದೇಶದಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ADVERTISEMENT

‘ಭಾರತವೇನಾದರೂ ದಾಳಿ ಮಾಡಿದರೆ, ಅದಕ್ಕೆ ತಕ್ಕ ಉತ್ತರ ನೀಡಲು ಪಾಕಿಸ್ತಾನದ ಸೇನೆ ಮತ್ತು ಜನರು ಸಂಪೂರ್ಣ ಸಿದ್ಧವಿದ್ದಾರೆ’ ಎಂದು ಅವರು ಹೇಳಿರುವುದಾಗಿ ‘ಡಾನ್‘ ಪತ್ರಿಕೆ ವರದಿ ಮಾಡಿದೆ.

ಜೈಷೆಗೆ ‘ಅಪಾಯಕಾರಿ ಪಟ್ಟ’ ಕಟ್ಟಿದ ಪಾಕ್‌

ಜೈಷ್–ಎ–ಮೊಹಮ್ಮದ್ ಸೇರಿದಂತೆ ಕೆಲವು ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನು ‘ತೀವ್ರ’ ಅಪಾಯಕಾರಿ ವರ್ಗಕ್ಕೆ ಸೇರಿಸಲುಪಾಕಿಸ್ತಾನ ನಿರ್ಧರಿಸಿದೆ.

ಪ್ಯಾರಿಸ್ ಮೂಲದ ಜಾಗತಿಕವೀಕ್ಷಣಾ ಸಂಘಟನೆ,ಆರ್ಥಿಕ ಕ್ರಿಯಾನಿರ್ವಹಣಾ ಪಡೆ (ಎಫ್‌ಎಟಿಎಫ್) ಒಪ್ಪಂದಕ್ಕೆಬದ್ಧವಾಗಿ ಪಾಕಿಸ್ತಾನ ಈ ಉಗ್ರ ಸಂಘಟನೆಗಳಚಟುವಟಿಕೆಗಳ ಮೇಲೆ ನಿಗಾ ಇರಿಸಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸಂಘಟನೆಗಳನ್ನು ಪಾಕಿಸ್ತಾನ,‘ಕಡಿಮೆಯಿಂದ ಮಧ್ಯಮ ಪ್ರಮಾಣದ’ ಅಪಾಯಕಾರಿ ವರ್ಗದಲ್ಲಿ ಇರಿಸಿರುವುದಕ್ಕಾಗಿ ಎಫ್‌ಎಟಿಎಫ್ ಅಸಮಾಧಾನ ವ್ಯಕ್ತಪಡಿಸಿತ್ತು.

ಐಎಸ್‌, ಅಲ್‌ ಕೈದಾ, ಜಮಾತ್–ಉದ್‌–ದವಾ (ಜೆಯುಡಿ), ಫಲಾಹ್‌–ಎ–ಇನ್ಸಾನಿಯತ್ ಫೌಂಡೇಷನ್ (ಎಫ್‌ಐಎಫ್‌), ಲಷ್ಕರ್‌ ಎ ತಯಬಾ (ಎಲ್‌ಇಟಿ), ಜೈಷ್‌–ಎ–ಮೊಹಮ್ಮದ್ (ಜೆಇಎಂ), ಹಖ್ಖಾನಿ ಜಾಲ ಹಾಗೂ ತಾಲಿಬಾನ್ ಜತೆ ಸಂಪರ್ಕ ಇರುವ ವ್ಯಕ್ತಿಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವುದರಿಂದ ಆಗುವ ಅಪಾಯಗಳನ್ನು ಪಾಕಿಸ್ತಾನ ಸೂಕ್ತವಾಗಿ ಅರಿತುಕೊಂಡಿಲ್ಲ ಎಂದು ಸಹ ಹೇಳಿತ್ತು.

ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್: ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದೆ ಹೋದಲ್ಲಿ, ಜಾಗತಿಕವಾಗಿ ಏಕಾಂಗಿಯಾಗಲಿದೆ ಎಂದು ಭಾರತೀಯ ಅಮೆರಿಕನ್ ಸಂಸದ ಅಮಿ ಬೆರಾ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಮೂಲದ ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವಚೀನಾ ಕೂಡ ತನ್ನ ನಿಲುವುಬದಲಿಸಬೇಕು ಎಂದು ಅವರುಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಕ್ರಿಕೆಟಿಗರ ವಿರುದ್ಧ ಸಿಡಿಮಿಡಿ

ಕರಾಚಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವ ವೇಳೆ ಭಾರತೀಯ ಆಟಗಾರರು ಸೇನೆಯ ಕ್ಯಾಪ್ ಧರಿಸುವ ಮೂಲಕ ಆಟವನ್ನು ರಾಜಕೀಯಗೊಳಿಸಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಿಳಿಸಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ಸೇನೆಯ ಕ್ಯಾಪ್ ಧರಿಸಿದ್ದ ಭಾರತೀಯ ಆಟಗಾರರು ಈ ಮ್ಯಾಚ್‌ನಲ್ಲಿ ತಮಗೆ ಬಂದ ಹಣವನ್ನು ಹುತಾತ್ಮರ ಕುಟುಂಬಕ್ಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.