ADVERTISEMENT

ಕಾಂಗ್ರೆಸ್ ಪಕ್ಷಕ್ಕೆ ಮರಳುವ ಇರಾದೆಯಿಲ್ಲ: ಆಜಾದ್

ಪಿಟಿಐ
Published 30 ಡಿಸೆಂಬರ್ 2022, 15:38 IST
Last Updated 30 ಡಿಸೆಂಬರ್ 2022, 15:38 IST
ಗುಲಾಮ್ ನಬಿ ಆಜಾದ್
ಗುಲಾಮ್ ನಬಿ ಆಜಾದ್   

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮರಳುವ ಯಾವುದೇ ಇರಾದೆಯಿಲ್ಲ ಎಂದು ಹೊಸದಾಗಿ ಸ್ಥಾಪಿಸಿರುವ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಕ್ಷದ (ಡಿಎಪಿ) ಅಧ್ಯಕ್ಷ ಗುಲಾಮ್ ನಬಿ ಆಜಾದ್ ಶುಕ್ರವಾರ ಹೇಳಿದರು.

ಪಿಟಿಐಗೆ ಈ ಕುರಿತು ಪ್ರತಿಕ್ರಿಯಿಸಿದಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಆಜಾದ್, ಮತ್ತೆ ಪಕ್ಷಕ್ಕೆ ಸೇರುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ನಾಯಕರ ಜೊತೆ ಮಾತುಕತೆ ನಡೆಸಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಹಾಗಿರುವಾಗ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿಗಳು ಹರಿದಾಡುತ್ತಿರುವುದು ನನ್ನನ್ನು ಆಶ್ಚರ್ಯಗೊಳಿಸಿದೆ ಎಂದು ಹೇಳಿದರು.

ತಮ್ಮ ನೂತನ ಪಕ್ಷದ ಕಾರ್ಯಕರ್ತರಲ್ಲಿ ಅನಿಶ್ಚಿತತೆ ಮತ್ತು ಆತ್ಮಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ನಾಯಕರು ಈ ರೀತಿಯ ಪ್ರಯತ್ನ ಮಾಡುತ್ತಿರಬಹುದು ಎಂದು ಆಜಾದ್ ಆರೋಪಿಸಿದರು.

ನಾನು ಯಾರೊಂದಿಗೂ ಕೆಸರೆರಚಾಟ ನಡೆಸಿಲ್ಲ. ಏನನ್ನು ಹೇಳಬೇಕೋ ಅದನ್ನು ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದೇನೆ. ನನ್ನ ಮೇಲೆ ನಂಬಿಕೆ ಇರಿಸಿದ್ದ ಜನರ ಸೇವೆಗಾಗಿ ನನ್ನದೇ ಹಾದಿಯಲ್ಲಿ ಸಾಗುತ್ತಿದ್ದೇನೆ. ನಮ್ಮ ಪಕ್ಷವು ಮತ್ತಷ್ಟು ಬಲಶಾಲಿಯಾಗಲಿದೆ ಎಂದು ಹೇಳಿದರು.

ಮುಂದಿನ ತಿಂಗಳು ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಲಿದ್ದು, ನೀವು ಪಾಲ್ಗೊಳ್ಳುವೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, ಅಂತಹ ಯಾವುದೇ ಯೋಜನೆಗಳಿಲ್ಲ. ನನ್ನದೇ ಕೆಲಸದಲ್ಲಿ ತಲ್ಲೀನವಾಗಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.