ADVERTISEMENT

ರಾಜಕೀಯ ತಿಕ್ಕಾಟದ ವಸ್ತುವಾಗಿ ‘ಶ್ರಮಿಕ್‌ ರೈಲು’

ಪಶ್ಚಿಮ ಬಂಗಾಳ ಸರ್ಕಾರದ ಅಸಹಕಾರ –ಶಾ: ಆರೋಪ ಸಾಬೀತುಪಡಿಸಿ, ಇಲ್ಲ ಕ್ಷಮೆ ಕೇಳಿ –ಟಿಎಂಸಿ ತಿರುಗೇಟು

ಪಿಟಿಐ
Published 9 ಮೇ 2020, 19:45 IST
Last Updated 9 ಮೇ 2020, 19:45 IST
   

ನವದೆಹಲಿ: ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ವಿಶೇಷ ಶ್ರಮಿಕ್‌ ರೈಲು ಸೇವೆಯನ್ನು ಕಲ್ಪಿಸುವ ವಿಷಯ ಈಗ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವೆ ರಾಜಕೀಯ ತಿಕ್ಕಾಟದ ವಸ್ತುವಾಗಿ ಪರಿಣಮಿಸಿದೆ.

ಎರಡು ಲಕ್ಷ ಶ್ರಮಿಕರು ಮರಳುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ರೈಲು ಸೇವೆ ಕಲ್ಪಿಸಲು ಮುಂದಾಗಿತ್ತು. ಆದರೆ, ರಾಜ್ಯದಿಂದ ಅಗತ್ಯ ಸಹಕಾರ ಸಿಗಲಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಪತ್ರ ಬರೆದು ಆರೋಪಿಸಿದ್ದರು.

ಗೃಹ ಸಚಿವರ ಪತ್ರಕ್ಕೆ ಕಟುವಾಗಿಯೇ ಪ್ರತಿಕ್ರಿಯಿಸಿರುವ ಆಡಳಿತರೂಡ ತೃಣಮೂಲ ಕಾಂಗ್ರೆಸ್ ಪಕ್ಷ, ‘ಶಾ ಸುಳ್ಳು ಹೇಳುತ್ತಿದ್ದಾರೆ. ಅವರು ಆರೋಪ ಸಾಬೀತುಪಡಿಸಲಿ, ಇಲ್ಲವೇ ಕ್ಷಮೆ ಕೋರಲಿ’ ಎಂದು ಆಗ್ರಹಿಸಿದೆ.

ADVERTISEMENT

‘ರೈಲುಗಳು ರಾಜ್ಯ ಪ್ರವೇಶಿಸಲು ಸರ್ಕಾರ ಅನುಮತಿ ನೀಡಿಲ್ಲ ಎಂಬ ಹೇಳಿಕೆ ಸುಳ್ಳು. ಎಂಟು ರೈಲುಗಳ ಸಂಚಾರಕ್ಕೆ ಕ್ರಮಕೈಗೊಂಡಿದ್ದು, ಮೊದಲ ರೈಲು ಶನಿವಾರ ಹೈದರಾಬಾದ್‌ನಿಂದ ಮಾಲ್ಡಾಗೆ ಬರಲಿದೆ’ ಎಂದು ತಿರುಗೇಟು ನೀಡಿದೆ.

ಕರ್ನಾಟಕ, ತಮಿಳುನಾಡು, ಪಂಜಾಬ್‌, ತೆಲಂಗಾಣದಲ್ಲಿ ಇರುವ ರಾಜ್ಯದ ಶ್ರಮಿಕರನ್ನು ಕರೆತರಲು ಎಂಟು ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಟಿಎಂಸಿ ಪ್ರತಿಪಾದಿಸಿತ್ತು. ರೈಲ್ವೆ ಇಲಾಖೆ ಇದಕ್ಕೆ ಪ್ರತಿಯಾಗಿ ದಾಖಲೆಗಳ ಪ್ರಕಾರ, ‘ಇಂಥ ಯಾವುದೇ ಪ್ರಸ್ತಾಪ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿತ್ತು. ಇದರ ಹಿಂದೆಯೇ ಶಾ ಪತ್ರ ಬರೆದಿದ್ದರು.

‘ಹೈದರಾಬಾದ್‌ನಿಂದ ಮಾಲ್ಡಾ ಕಡೆಗೆ ಶನಿವಾರ ರೈಲು ಹೊರಡಲಿದೆ ಎಂದು ಟಿಎಂಸಿ ಹೇಳಿದೆ. ಆದರೆ ಈ ಪ್ರಯಾಣ ಕುರಿತ ಪ್ರಸ್ತಾವ ಬಂದಿಲ್ಲ’ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.ಶ್ರಮಿಕರನ್ನು ಕರೆದೊಯ್ಯುವ 47 ರೈಲುಗಳು ಶನಿವಾರ ಸಂಚಾರ ಆರಂಭಿಸಿವೆ. ಇದರಲ್ಲಿ ಯಾವುದೂ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿಲ್ಲ ಎಂದು ಇಲಾಖೆ ತಿಳಿಸಿದೆ.

ವಲಸೆ ಕಾರ್ಮಿಕರಿಗಾಗಿ ‌711 ಶಿಬಿರ: ಟಿಎಂಸಿ

ನವದೆಹಲಿ: ‘ಅಮಿತ್‌ ಶಾ ಸುಳ್ಳು ಹೇಳುತ್ತಿದ್ದು, ರಾಜಕೀಯ ಲಾಭಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ’ ಎಂದು ಟಿಎಂಸಿ ಪ್ರಶ್ನಿಸಿದೆ.

ಟಿಎಂಸಿ ಸಂಸದ ಕಾಕೋಳಿ ಘೋಷ್‌ ದಸ್ತಿದರ್, ‘ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರಿಗಾಗಿ 711 ಶಿಬಿರ ನಡೆಸುತ್ತಿದ್ದು, ಚೆನ್ನಾಗಿ ನೋಡಿಕೊಳ್ಳುತ್ತಿದೆ. ನಿಮ್ಮ ಕಣ್ಮುಂದೆ ರೈಲಿಗೆ ಸಿಕ್ಕು 16 ಶ್ರಮಿಕರು ಸತ್ತಿದ್ದಾರೆ. ರೈಲ್ವೆ ಸಚಿವರು ಅದರ ಹೊಣೆ ಹೊರುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.

ಈವರೆಗೆ ಪಶ್ಚಿಮ ಬಂಗಾಳಕ್ಕೆ 31,224 ಶ್ರಮಿಕರು ಮರಳಿದ್ದಾರೆ. ಈಗ ಸಿ.ಎಂ ಮಮತಾ ಬ್ಯಾನರ್ಜಿ ಅವರಿಗೆ ಇರಿಸುಮುರಿಸು ಮೂಡಿಸಿ, ರಾಜಕೀಯ ಲಾಭ ಪಡೆಯುವುದು ಕೇಂದ್ರದ ಉದ್ದೇಶವಾಗಿದೆ ಎಂದು ಟೀಕಿಸಿದರು.

‘30,000 ಜನರ ಕರೆತರಲು ಕ್ರಮ‘

ಕೋಲ್ಕತ್ತ: ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಿಂದ 30,000 ಶ್ರಮಿಕರನ್ನು ಕರೆತರಲು ರಾಜ್ಯ ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶ್ರಮಿಕರಲ್ಲದೆ ರೋಗಿಗಳು, ಅವರ ಅರೈಕೆದಾರು, ವಿದ್ಯಾರ್ಥಿಗಳು, ಯಾತ್ರಿಕರು, ರಾಜ್ಯದ ಪ್ರವಾಸಿಗಳು ಸೇರಿದ್ದು, ತೆಲಂಗಾಣ, ತಮಿಳುನಾಡು, ಪಂಜಾಬ್‌ನಲ್ಲೂ ಇದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಗಳೂರಿನಿಂದ 7,500 ಜನರನ್ನು ಹೊತ್ತು ರೈಲು ಶನಿವಾರ ಪ್ರಯಾಣ ಬೆಳೆಸಿದ್ದು, ರಾಜ್ಯದ ಬಂಕುರಾ, ಪುರುಲಿಯಾ, ನ್ಯೂ ಜಲ್‌ಪೈಗುರಿ ನಿಲ್ದಾಣಗಳಿಗೆ ಭಾನುವಾರ, ಸೋಮವಾರ ತಲುಪಲಿವೆ.

ತಮಿಳುನಾಡಿನ ವೆಲ್ಲೂರಿನಿಂದ 2418 ಜನರನ್ನು ಹೊತ್ತ ರೈಲು ಖರಗ್‌ಪುರ ಮತ್ತು ಹೌರಾ ನಿಲ್ದಾಣಕ್ಕೆ ಮಂಗಳವಾರ ತಲುಪಲಿದೆ. ತೆಲಂಗಾಣದಿಂದ 17,000 ಕಾರ್ಮಿಕರು ಮುಂದಿನ ವಾರ ಮರಳುವ ಸಂಭವವಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.