ADVERTISEMENT

ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 15 ಮಾರ್ಚ್ 2023, 7:39 IST
Last Updated 15 ಮಾರ್ಚ್ 2023, 7:39 IST
   

ನವದೆಹಲಿ: ಬ್ರಿಟನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತಂತೆ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಹುಲ್ ಕ್ಷಮೆಯಾಚನೆಗೆ ಒತ್ತಾಯಿಸುವವರು, ಮೋದಿ ತಮ್ಮ ಹೇಳಿಕೆ ಮೂಲಕ ವಿದೇಶಗಳಲ್ಲಿ ಭಾರತದ ಜನರನ್ನು ಅಪಮಾನಿರುವ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

‘ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸುವ ಜನರಿಗೆ ನಾನು ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಮೋದಿಯವರು ಐದಾರು ದೇಶಗಳಿಗೆ ಭೇಟಿ ನೀಡಿ, ಅಲ್ಲಿ ನಮ್ಮ ದೇಶದ ಜನರನ್ನು ಅವಮಾನಿಸಿದ ಮತ್ತು ಭಾರತದಲ್ಲಿ ಹುಟ್ಟಿದ್ದು ಪಾಪ ಎಂದು ನೀಡಿರುವ ಹೇಳಿಕೆ ಬಗ್ಗೆ ನೀವು ಉತ್ತರಿಸಬೇಕು’ಎಂದು ಖರ್ಗೆ ಹೇಳಿದ್ದಾರೆ.

ADVERTISEMENT

‘ಇಲ್ಲಿ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ, ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲಾಗುತ್ತಿದೆ, ಟಿವಿ ಚಾನೆಲ್‌ಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಹಾಗೂ ಸತ್ಯವನ್ನು ಮಾತನಾಡುವ ಜನರನ್ನು ಜೈಲಿಗೆ ಹಾಕಲಾಗುತ್ತಿದೆ, ಹಾಗಾದರೆ, ಇದು ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಪ್ರಕ್ರಿಯೆಯಲ್ಲದೆ ಇನ್ನೇನು?’ ಎಂದು ಕಾಂಗ್ರೆಸ್ ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಭಾರತದಲ್ಲಿ ಪ್ರಜಾಪ್ರಭುತ್ವವು ದಾಳಿಗೆ ಒಳಗಾಗಿದೆ’ಎಂದು ಬ್ರಿಟನ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಕ್ಷಮೆಯಾಚನೆಗೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ.

ತಮ್ಮ ಇತ್ತೀಚಿನ ಬ್ರಿಟನ್ ಪ್ರವಾಸದ ವೇಳೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗಳ ಕುರಿತಂತೆ ಕ್ಷಮೆಯಾಚನೆಗೆ ಸಂಸತ್ತಿನಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಹೀಗಾಗಿ, ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ಎರಡು ದಿನಗಳಲ್ಲಿ ಯಾವುದೇ ಮಹತ್ವದ ಚರ್ಚೆ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.