ADVERTISEMENT

ಮೈತ್ರಿಯಿಂದ ಬಿಎಸ್‌ಪಿ ಹೊರಕ್ಕೆ?

ಮೈತ್ರಿಯಿಂದ ಬಿಎಸ್‌ಪಿ ಹೊರಕ್ಕೆ?

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:45 IST
Last Updated 3 ಜೂನ್ 2019, 20:45 IST
ಮಾಯಾವತಿ
ಮಾಯಾವತಿ   

ಲಖನೌ: ‘ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನೀರಸ ಸಾಧನೆಗೆ ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಯೇ ಕಾರಣ’ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿ ಅಂತ್ಯಗೊಳ್ಳಲಿದೆ. ರಾಜ್ಯದ 12 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಇಂಗಿತವನ್ನು ಈ ಮೂಲಕ ನೀಡಿದ್ದಾರೆ.

ಉಪ ಚುನಾವಣೆಗಳಲ್ಲಿ ಬಿಎಸ್‌ಪಿ ಸ್ಪರ್ಧಿಸುವುದಿಲ್ಲ ಎಂಬ ನಿಲುವನ್ನು ಮಾಯಾವತಿ ಈ ಮೂಲಕ ಕೈಬಿಟ್ಟಂತಾಗಿದೆ. ಕಳೆದ ಒಂದು ದಶಕದಲ್ಲಿ ಯಾವುದೇ ಉಪ ಚುನಾವಣೆಯಲ್ಲಿ ಬಿಎಸ್‌ಪಿ ಸ್ಪರ್ಧೆ ಮಾಡಿಲ್ಲ.

ADVERTISEMENT

ಸೋಮವಾರ ದೆಹಲಿಯಲ್ಲಿ ಪಕ್ಷದ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಪರಾಮರ್ಶೆ ನಡೆಸಿದರು.

‘ಯಾದವರ ಮತಗಳ ವಿಭಜನೆ ತಡೆಯಲು ಅಖಿಲೇಶ್‌ ಯಾದವ್‌ ವಿಫಲರಾದರು. ಪತ್ನಿ ಡಿಂಪಲ್‌ ಅವರನ್ನೇ ಅಖಿಲೇಶ್‌ ಗೆಲ್ಲಿಸಿಕೊಳ್ಳಲಾಗಲಿಲ್ಲ’ ಎಂದು ಮಾಯಾವತಿ ಹೇಳಿದ್ದಾರೆ ಎನ್ನಲಾಗಿದೆ.

‘ಉತ್ತರ ಪ್ರದೇಶದಲ್ಲಿ ಪಕ್ಷದ ನೀರಸ ಸಾಧನೆಗೆ ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿಯೇ ಕಾರಣ. ಎಸ್‌ಪಿ ತನ್ನ ಮತಗಳು ಬಿಎಸ್‌ಪಿಗೆ ಬೀಳುವಂತೆ ನೋಡಿಕೊಳ್ಳುವಲ್ಲಿ ವಿಫಲವಾಯಿತು’ ಎಂದು ಆರೋಪಿಸಿದರು.

ಡಿಂಪಲ್‌ ಯಾದವ್ ಕನೌಜ್‌ ಲೋಕಸಭೆ ಕ್ಷೇತ್ರದಲ್ಲಿ 12,000 ಮತಗಳಿಂದ ಸೋತಿದ್ದರು. ರಾಜ್ಯದಲ್ಲಿ ಲೋಕಸಭೆಯ 80 ಕ್ಷೇತ್ರಗಳಿದ್ದು, ಬಿಎಸ್‌ಪಿ 10, ಎಸ್‌ಪಿ 5 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.ಬಿಜೆಪಿ 62 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಈ ಮಧ್ಯೆ, ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಗುಜರಾತ್, ಬಿಹಾರ ಸೇರಿ ಆರು ರಾಜ್ಯಗಳಲ್ಲಿ ಚುನಾವಣಾ ಸಂಯೋಜಕರು, ಎರಡು ರಾಜ್ಯಗಳಲ್ಲಿ ಪಕ್ಷದ ಅಧ್ಯಕ್ಷರನ್ನು ಮಾಯಾವತಿ ಪದಚ್ಯುತಗೊಳಿಸಿದ್ದಾರೆ.

ಅಖಿಲೇಶ್ ಯಾದವ್ ಮೌನಕ್ಕೆ ಶರಣು

ಬಿಎಸ್‌ಪಿ ಜೊತೆಗಿನ ಮೈತ್ರಿ ಮುಂದುವರಿಯಲಿದೆ ಎಂಬ ಆಶಯವನ್ನು ಅಖಿಲೇಶ್‌ ಯಾದವ್‌ ಅವರು ಹೊಂದಿದ್ದಾರೆ. ಮೈತ್ರಿ ಮುರಿಯುವ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಸೋಮವಾರ ಅಖಿಲೇಶ್‌ ಯಾದವ್ ಅವರು ಆಜಂಗಡ ಕ್ಷೇತ್ರದಲ್ಲಿ ಸಮಾವೇಶದಲ್ಲಿ ಮಾತನಾಡಿದರು. ಬಿಎಸ್‌ಪಿಯ ಅನೇಕ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.