ADVERTISEMENT

‘ಜೈ ಶ್ರೀರಾಮ್‌‘ ರಾಜಕೀಯ ಘೋಷಣೆಯಲ್ಲ: ಸಂಜಯ್ ರಾವುತ್‌

ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌

ಪಿಟಿಐ
Published 25 ಜನವರಿ 2021, 7:58 IST
Last Updated 25 ಜನವರಿ 2021, 7:58 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಮುಂಬೈ: ‘ಜೈ ಶ್ರೀರಾಮ್‌‘ ಎನ್ನುವುದು ರಾಜಕೀಯ ಘೋಷಣೆಯಲ್ಲ. ಇದು ನಂಬಿಕೆಯ ವಿಷಯ. ಈ ಘೋಷಣೆಯಿಂದ ಯಾರೊಬ್ಬರ ಜಾತ್ಯತೀತತೆಗೂ ಧಕ್ಕೆ ಆಗುವುದಿಲ್ಲ’ ಎಂದು ರಾಜ್ಯಸಭೆ ಸದಸ್ಯ, ಶಿವಸೇನೆ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

‘ಈಚೆಗೆ ಕೋಲ್ಕತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗಿದಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೋವಾಗಿದೆ’ ಎಂಬ ಬಿಜೆಪಿ ಆರೋಪಿಸಿರುವ ಕುರಿತು ಗಮನಸೆಳೆದಾಗ ರಾವುತ್ ಹೀಗೆ ಪ್ರತಿಕ್ರಿಯಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾವುತ್, ‘ಭಗವಾನ್ ರಾಮ ಈ ದೇಶದ ಹೆಮ್ಮೆ. ಇದು, ನಂಬಿಕೆಗೆ ಸಂಬಂಧಿಸಿದೆ. ಮಮತಾ ದೀದಿಗೂ ಭಗವಾನ್ ಶ್ರೀರಾಮನ ಮೇಲೆ ನಂಬಿಕೆ ಇರುವ ಬಗ್ಗೆ ನನಗೆ ಖಾತ್ರಿಯಿದೆ‘ ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ, ‘ಅಂದು ‘ಜೈ ಶ್ರೀರಾಮ್‘ ಘೋಷಣೆ ಕೇಳಿ ಮಮತಾ ಬ್ಯಾನರ್ಜಿ ವಿಚಲಿತರಾಗುವ ಅಗತ್ಯವಿರಲಿಲ್ಲ. ಅಲ್ಲದೆ, ಘೋಷಣೆ ಕೂಗಿದವರ ಜೊತೆ ಮಮತಾ ಮಾತು ಮುಂದುವರಿಸಿದ್ದರೆ ಗಲಾಟೆ ಆಗುತ್ತಿತ್ತೇನೋ? ಆದರೆ, ಎಲ್ಲ ಮತ ಬ್ಯಾಂಕ್‌ಗಳತ್ತ ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಉಲ್ಲೇಖಿಸಿದೆ.

‘ಮಮತಾ ಬ್ಯಾನರ್ಜಿ ಅವರಲ್ಲಿರುವ ‘ದೌರ್ಬಲ್ಯ ಅಂಶ‘ಗಳನ್ನು ಬಿಜೆಪಿ ಗುರುತಿಸಿದೆ. ವಿಧಾನಸಭಾ ಚುನಾವಣೆ ಮುಗಿಯವವರೆಗೂ ಅವರ ಇಂಥ ಸೂಕ್ಷ್ಮ, ಭಾವನಾತ್ಮಕ ಅಂಶಗಳನ್ನು ಬಳಸಿ ಆಟವಾಡಲಿದೆ’ ಎಂದು ಸಂಪಾದಕೀಯದಲ್ಲಿ ಶಿವಸೇನೆ ತರಾಟೆ ತೆಗೆದುಕೊಂಡಿದೆ.

ಸಂಪಾದಕೀಯದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲಾಗಿದ್ದು, ಚುನಾವಣೆಯಲ್ಲಿ ಮಮತಾ ಅವರನ್ನು ಸೋಲಿಸಲು ಅವರದೇ ಪಕ್ಷ ಟಿಎಂಸಿ ಮುಖಂಡರನ್ನು ಸೆಳೆಯುತ್ತಿದೆ ಎಂದಿದೆ.

ಸದ್ಯ, ಪಶ್ಚಿಮ ಬಂಗಾಳ, ಪಂಜಾಬ್‌ ಮತ್ತು ಮಹಾರಾಷ್ಟ್ರ ರಾಜ್ಯಗಳು ‘ದೇಶದ ಸ್ವಾತಂತ್ರ್ಯ ಹೋರಾಟ’ದ ಮುಂಚೂಣಿಯಲ್ಲಿವೆ. ಈ ರಾಜ್ಯಗಳು ಸದ್ಯ, ತನ್ನ ಆತ್ಮಗೌರವಕ್ಕಾಗಿ ಹೋರಾಟ ನಡೆಸುತ್ತಿವೆ. ಕೇಂದ್ರ ಇದರ ವಿರುದ್ಧವಾಗಿದೆ ಎಂದು ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.