ADVERTISEMENT

ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು: ಕೇಂದ್ರಕ್ಕೆ ಸುಪ್ರೀಂ ಕೋರ್ಟ್

ಪಿಟಿಐ
Published 6 ಡಿಸೆಂಬರ್ 2022, 13:56 IST
Last Updated 6 ಡಿಸೆಂಬರ್ 2022, 13:56 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಯಾರೊಬ್ಬರೂ ಖಾಲಿ ಹೊಟ್ಟೆಯಲ್ಲಿ ಮಲಗಕೂಡದು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್‌ಎಫ್‌ಎಸ್‌ಎ) ಅನುಸಾರ ದೇಶದ ಕಟ್ಟಕಡೆಯ ವ್ಯಕ್ತಿಗೂ ಆಹಾರ ಧಾನ್ಯ ತಲುಪುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಸ್ವಯಂ ಪ‍್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಇ–ಶ್ರಮ್‌ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿರುವ ವಲಸಿಗರು ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಸಂಖ್ಯೆ ಎಷ್ಟು ಎಂಬುದರ ಕುರಿತ ಪಟ್ಟಿಯನ್ನು ಹೊಸದಾಗಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

‘ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ನಾವು ಹೇಳುತ್ತಿಲ್ಲ. ಕೋವಿಡ್‌ ಸಮಯದಲ್ಲಿ ಕೇಂದ್ರವು ನಾಗರಿಕರಿಗೆ ಆಹಾರ ಧಾನ್ಯ ಪೂರೈಸುವ ಕೆಲಸ ಮಾಡಿದೆ. ಈ ಕಾರ್ಯ ಮುಂದುವರಿಯಬೇಕು. ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗಬಾರದು. ಅದು ನಮ್ಮ ಸಂಸ್ಕೃತಿ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

‘2011ರ ಜನಗಣತಿ ವೇಳೆ ಗುರುತಿಸಲಾಗಿರುವ ಜನರಿಗಷ್ಟೇ ಎನ್ಎಫ್‌ಎಸ್‌ಎ ಪ್ರಯೋಜನ ಸೀಮಿತವಾಗಬಾರದು. ಅಗತ್ಯವಿರುವ ಇನ್ನಷ್ಟು ಮಂದಿಗೆ ಈ ಕಾಯ್ದೆಯಡಿ ನೆರವು ಒದಗಿಸಬೇಕು. ಆಹಾರದ ಹಕ್ಕು ಮೂಲಭೂತವಾದುದು. ಸಂವಿಧಾನದ ವಿಧಿ 21ರ ಅಡಿ ಇದನ್ನು ನೀಡಲಾಗಿದೆ’ ಎಂದು ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್‌, ಹರ್ಷ ಮಂದೇರ್‌ ಮತ್ತು ಜಗದೀಪ್ ಚೋಕರ್‌ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಪ್ರಶಾಂತ್‌ ಭೂಷಣ್‌, ‘2011ರ ಜನಗಣತಿ ಬಳಿಕ ದೇಶದ ಜನಸಂಖ್ಯೆ ಹೆಚ್ಚಾಗಿದೆ.ಎನ್‌ಎಫ್‌ಎಸ್‌ಎ ಅನ್ನು ಕಡ್ಡಾಯವಾಗಿ ಜಾರಿಗೊಳಿಸದೆ ಇದ್ದರೆ ಅರ್ಹ ಮತ್ತು ಅಗತ್ಯವುಳ್ಳ ಸಾಕಷ್ಟು ಫಲಾನುಭವಿಗಳು ಇದರ ಪ್ರಯೋಜನದಿಂದ ವಂಚಿತರಾಗುತ್ತಾರೆ’ ಎಂದು ನ್ಯಾಯಪೀಠದ ಎದುರು ಕಳವಳ ವ್ಯಕ್ತಪಡಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ತಲಾ ಆದಾಯ ಏರಿಕೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕುಸಿತ ಕಾಣುತ್ತಿದೆ’ ಎಂದೂ ಅವರು ಹೇಳಿದರು.

ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ, ‘ಒಟ್ಟು 81.35 ಕೋಟಿ ಫಲಾನುಭವಿಗಳು ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಡುತ್ತಾರೆ. ಭಾರತದ ಮಟ್ಟಿಗೆ ಇದು ಬಹುದೊಡ್ಡ ಸಂಖ್ಯೆ’ ಎಂದು ತಿಳಿಸಿದರು.

‘ಸರ್ಕಾರವು ಫಲಾನುಭವಿಗಳ ಸಂಖ್ಯೆಯನ್ನು 2011ರ ಜನಗಣತಿ ವೇಳೆ ಗುರುತಿಸಲಾಗಿದ್ದ ಸಂಖ್ಯೆಗೆ ಸೀಮಿತಗೊಳಿಸಿಲ್ಲ. ಈ ಪಟ್ಟಿಗೆ ಮತ್ತಷ್ಟು ಮಂದಿಯನ್ನು ಸೇರ್ಪಡೆ ಮಾಡುತ್ತಲೇ ಇದೆ. ಹೀಗಾಗಿ ಈ ಪಟ್ಟಿ ಬೆಳೆಯುತ್ತಲೇ ಇದೆ’ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಪ್ರಶಾಂತ್‌ ಭೂಷಣ್‌, ‘ತಮ್ಮ ಪಾಲಿನ ಆಹಾರ ಧಾನ್ಯಗಳು ಖಾಲಿಯಾಗಿರುವುದಾಗಿ ಒಟ್ಟು 14 ರಾಜ್ಯಗಳು ಅಫಿಡವಿಟ್‌ ಸಲ್ಲಿಸಿವೆ’ ಎಂದು ಹೇಳಿದರು.

‘ಹಿಂದಿನ ಎಂಟು ವರ್ಷಗಳಲ್ಲಿ ದೇಶದ ನಾಗರಿಕರ ತಲಾ ಆದಾಯವು ಶೇ 33.4ರಷ್ಟು ಏರಿದೆ. ಇದರಿಂದಾಗಿ ಬಹುತೇಕ ಕುಟುಂಬಗಳು ಅಧಿಕ ಆದಾಯದ ವರ್ಗಕ್ಕೆ ಸೇರ್ಪಡೆಯಾಗಿವೆ. ಈ ಕುಟುಂಬಗಳು 2013–14ರಲ್ಲಿದ್ದಷ್ಟು ದಯನೀಯ ಸ್ಥಿತಿಯಲ್ಲಿ ಈಗ ಇಲ್ಲ’ ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ಉಭಯ ಬಣದವರ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.