ADVERTISEMENT

ನಾಯಕರ ನಾಮಪತ್ರ ಸಲ್ಲಿಕೆ ಭರಾಟೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 20:49 IST
Last Updated 15 ಮಾರ್ಚ್ 2021, 20:49 IST
ಕಮಲಹಾಸನ್‌ ನಾಮಪತ್ರ ಸಲ್ಲಿಕೆ
ಕಮಲಹಾಸನ್‌ ನಾಮಪತ್ರ ಸಲ್ಲಿಕೆ   

ದೇಶದ 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗೆ ಏಪ್ರಿಲ್ 6ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಹಲವು ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಿರುವ ಎಲ್ಲಾ ಪಕ್ಷಗಳು ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ.

* ಮಕ್ಕಳ ನೀಧಿ ಮಯ್ಯಂ ಮುಖ್ಯಸ್ಥ ಕಮಲಹಾಸನ್ ಅವರು ತಮಿಳುನಾಡಿನ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎಐಎಡಿಎಂಕೆ ಪ್ರಾಬಲ್ಯವಿದ್ದ ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿರುವ ಕಮಲಹಾಸನ್‌ ಅವರು ಎಂಎನ್‌ಎಂನ ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಹೌದು. ಇದೇ ಕ್ಷೇತ್ರದಲ್ಲಿ ಬಿಜೆಪಿಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವನತಿ ಶ್ರೀನಿವಾಸನ್ ಸಹ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ

* ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಇ.ಕೆ.ಪಳನಿಸ್ವಾಮಿ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ತವರು ಕ್ಷೇತ್ರವಾದ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವರು ನಾಮಪತ್ರ ಸಲ್ಲಿಸಿದ್ದಾರೆ

ADVERTISEMENT

* ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸ್ಟಾಲಿನ್ ಅವರು 2011ರಿಂದ ಎರಡು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿದ್ದಾರೆ. ಡಿಎಂಕೆ ಭದ್ರಕೋಟೆಯಾಗಿರುವ ಕೊಳತ್ತೂರಿನಿಂದ ಈಗ ಮೂರನೇ ಬಾರಿ ಚುನಾಯಿತರಾಗುವ ನಿರೀಕ್ಷೆಯಲ್ಲಿದ್ದಾರೆ

* ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರು ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಿಂದ ಅವರು ಕಣಕ್ಕೆ ಇಳಿಯುತ್ತಿರುವುದು ಇದು 2ನೇ ಬಾರಿ

* ಎಐಎನ್‌ಆರ್‌ಸಿ ಮುಖ್ಯಸ್ಥ ಮತ್ತು ಪುದುಚೇರಿಯ ವಿರೋಧ ಪಕ್ಷದ ನಾಯಕರಾಗಿದ್ದ ಎನ್‌.ರಂಗಸ್ವಾಮಿ ಅವರು ಪುದುಚೇರಿಯ ತಟ್ಟಂಚವಾಡಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರು ಇದೇ ಮೊದಲ ಬಾರಿ ಈ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ.

ಕಮಲಹಾಸನ್ ಕಾರಿನ ಮೇಲೆ ದಾಳಿ

ಕಾಂಚೀಪುರಂ (ತಮಿಳುನಾಡು) (ಪಿಟಿಐ): ಮಕ್ಕಳ ನೀಧಿ ಮಯ್ಯಂ ಮುಖ್ಯಸ್ಥ ಕಮಲಹಾಸನ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಭಾನುವಾರ ತಡರಾತ್ರಿ ಯುವಕನೊಬ್ಬ ದಾಳಿ ನಡೆಸಿದ್ದಾನೆ. ಕಾಂಚೀಪುರಂನಲ್ಲಿ ಪ್ರಚಾರ ನಡೆಸಿ, ಹೋಟೆಲ್‌ಗೆ ವಾಪಸಾಗುವಾಗ ಈ ಘಟನೆ ನಡೆದಿದೆ.

‘ಘಟನೆಯಲ್ಲಿ ಕಮಲಹಾಸನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಕಾರಿನ ಗಾಜಿಗೆ ಹಾನಿಯಾಗಿದೆ. ಇಂತಹ ದಾಳಿಗಳಿಂದ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆದರಿಸಲು ಸಾಧ್ಯವಿಲ್ಲ’ ಎಂದು ಪಕ್ಷದ ವಕ್ತಾರ ಎ.ಜಿ.ಮೌರ್ಯ ಅವರು ತಿಳಿಸಿದ್ದಾರೆ.

ದಾಳಿ ನಡೆಸಿದ ಯುವಕ ಮದ್ಯ ಕುಡಿದಿದ್ದ. ಆತನ ಮೇಲೆ ಎಂಎನ್‌ಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲೇ ಪೊಲೀಸರು ಬಂದು, ಯುವಕನನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.