ADVERTISEMENT

ಕುಂಭಮೇಳ ನಕಲಿ ಕೋವಿಡ್‌ ಪರೀಕ್ಷಾ ಹಗರಣ: ಮೂವರ ವಿರುದ್ಧ ಜಾಮೀನು ರಹಿತ ವಾರಂಟ್

ಪಿಟಿಐ
Published 30 ಆಗಸ್ಟ್ 2021, 10:24 IST
Last Updated 30 ಆಗಸ್ಟ್ 2021, 10:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡೆಹರಾಡೂನ್: ಕುಂಭಮೇಳದ ಸಮಯದಲ್ಲಿ ನಕಲಿ ಕೋವಿಡ್ ಪರೀಕ್ಷೆ ನಡೆಸಿದ ಆರೋಪದ ಮೇಲೆ ಮ್ಯಾಕ್ಸ್ ಕಾರ್ಪೊರೇಟ್ ಸೇವೆಗಳ ಮಲ್ಲಿಕಾ ಮತ್ತು ಶರತ್ ಪಂತ್ ಹಾಗೂ ನಲ್ವಾ ಪಾಥ್ ಲ್ಯಾಬ್ಸ್‌ನ ಡಾ.ನವತೇಜ್ ನಲ್ವಾ ವಿರುದ್ಧ ಹರಿದ್ವಾರ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಪ್ರಕರಣದ ಮೂವರು ಪ್ರಮುಖ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಅನ್ನು ಶನಿವಾರ ಹರಿದ್ವಾರದ ಮುಖ್ಯ ನ್ಯಾಯಾಧೀಶರು ಹೊರಡಿಸಿದ್ದಾರೆ.

ಸಿಜೆಎಂ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್‌ಗಳನ್ನು ಪಡೆದ ನಂತರ, ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಯತ್ನಿಸುತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ಉತ್ತರ ಪ್ರದೇಶ, ಹರಿಯಾಣ ಮತ್ತು ನವದೆಹಲಿಗೆ ಕಳುಹಿಸಲಾಗಿದೆ ಎಂದು ಹರಿದ್ವಾರ ಎಸ್‌ಎಸ್‌ಪಿ ಸೆಂಥಿಲ್ ಆವೊದೈ ಕೃಷ್ಣ ರಾಜ್ ಎಸ್ ತಿಳಿಸಿದ್ದಾರೆ.

ADVERTISEMENT

ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ನಕಲಿ ಕೋವಿಡ್‌ ಪರೀಕ್ಷಾ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ತನಿಖಾ ಸಮಿತಿಯನ್ನು ರಚಿಸಿದ್ದರು. ಈ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.

ನೋಯ್ಡಾ ಮೂಲದ ಮ್ಯಾಕ್ಸ್ ಕಾರ್ಪೊರೇಟ್ ಸರ್ವಿಸಸ್ ಕಂಪನಿಗೆ ಕುಂಭಮೇಳದ ಸಮಯದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುವ ಕೆಲಸವನ್ನು ನಿಯೋಜಿಸಲಾಗಿತ್ತು. ಬಳಿಕ ಈ ಕೆಲಸವನ್ನು ದೆಹಲಿ ಮೂಲದ ಲಾಲ್‌ಚಾಂದನಿ ಲ್ಯಾಬ್ಸ್ ಮತ್ತು ಹಿಸಾರ್ ಮೂಲದ ನಲ್ವಾ ಲ್ಯಾಬ್‌ಗಳಿಗೆ ಹೊರಗುತ್ತಿಗೆ ನೀಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಮೇಳದ ಅಧಿಕಾರಿ (ವೈದ್ಯಕೀಯ ಮತ್ತು ಆರೋಗ್ಯ) ಡಾ.ಅರ್ಜುನ್‌ ಸಿಂಗ್‌ ಸೆಂಗಾರ್‌ ಮತ್ತು ಆಗಿನ ಉಸ್ತುವಾರಿ ಅಧಿಕಾರಿ (ವೈದ್ಯಕೀಯ ಮತ್ತು ಆರೋಗ್ಯ) ಡಾ.ಎನ್‌.ಕೆ ತ್ಯಾಗಿ ಅವರನ್ನು ಅಮಾನತುಗೊಳಿಸಲು ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ ಅವರು ಆ.26ರಂದು ರಾತ್ರಿ ಆದೇಶ ಹೊರಡಿಸಿದ್ದರು. ಅದರಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.