ADVERTISEMENT

ಸನಾತನ ಧರ್ಮ ನಾಶಕ್ಕೆ ಯತ್ನಿಸುವವರ ವಿರುದ್ಧ ಹೋರಾಟ: ತೋಮರ್

ಪಿಟಿಐ
Published 24 ಅಕ್ಟೋಬರ್ 2023, 16:14 IST
Last Updated 24 ಅಕ್ಟೋಬರ್ 2023, 16:14 IST
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್   

ಗ್ವಾಲಿಯರ್ (ಪಿಟಿಐ): ಸನಾತನ ಧರ್ಮ ನಾಶಪಡಿಸಲು ಮತ್ತು ದೇಶ ಒಡೆಯಲು ಬಯಸುವ ಶಕ್ತಿಗಳ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.   

ನಗರದಲ್ಲಿ ಮಂಗಳವಾರ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧ ಮಾತ್ರವಲ್ಲ, ದೇಶ ಒಡೆಯಲು ಮತ್ತು ಸನಾತನ ಧರ್ಮ ನಾಶಪಡಿಸಲು ಬಯಸುವ ಶಕ್ತಿಗಳ ವಿರುದ್ಧವೂ ಇದೆ’ ಎಂದರು.

ಕಾಂಗ್ರೆಸ್‌ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಸುಳ್ಳು ಭರವಸೆ, ಆಶ್ವಾಸನೆ ನೀಡುತ್ತಿದೆ ಎಂದರು. ತಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದು ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ತೋಮರ್, ವಿಧಾನಸಭಾ ಚುನಾವಣೆಗೆ ಬಿಜೆಪಿ ವರ್ಷವಿಡೀ ಸಿದ್ಧತೆಗಳನ್ನು ಮಾಡಿದೆ ಮತ್ತು ಬೂತ್ ಮಟ್ಟದವರೆಗೆ ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ADVERTISEMENT

ದಿಮಾನಿ ವಿಧಾನಸಭಾ ಕ್ಷೇತ್ರದಿಂದ ತೋಮರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಇ.ಡಿ. ದಾಳಿ ಕಾಂಗ್ರೆಸ್ ಗೆಲುವಿನ ಸೂಚಕ: ಗೆಹಲೋತ್

ಜೈಪುರ (ಪಿಟಿಐ): ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕೆ ಕಿರುಕುಳ ನೀಡುವ ಉದ್ದೇಶದಿಂದ ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬಳಕೆ ಮಾಡಿಕೊಳ್ಳುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಆರೋಪಿಸಿದ್ದಾರೆ.

‘ರಾಜಸ್ಥಾನದಲ್ಲಿ ಇ.ಡಿ. ಅಧಿಕಾರಿಗಳು ಎಡೆಬಿಡದೆ ದಾಳಿ ನಡೆಸುತ್ತಿರುವುದು ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲ್ಲಲಿದೆ ಎಂಬುದಕ್ಕೆ ಪುರಾವೆಯಾಗಿದೆ. ರಾಜಸ್ಥಾನದಲ್ಲಿ ಜನರ ವಿಶ್ವಾಸಕ್ಕೆ ಪಾತ್ರವಾಗಲು ಸಾಧ್ಯವಾಗದ ಕಾರಣ ಬಿಜೆಪಿಯು ಇ.ಡಿ.ಯನ್ನು ಬಳಸಿಕೊಳ್ಳುತ್ತಿದೆ’ ಎಂದು ಗೆಹಲೋತ್ ಅವರು ಎಕ್ಸ್‌ ವೇದಿಕೆಯಲ್ಲಿ ಬರೆದಿದ್ದಾರೆ.

ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಕುರಿತ ತನಿಖೆಯ ಭಾಗವಾಗಿ ಇ.ಡಿ. ಹಲವೆಡೆ ಶೋಧ ನಡೆಸಿದೆ. ಈ ಹಿನ್ನೆಲೆಯಲ್ಲಿ ಗೆಹಲೋತ್ ಈ ಮಾತು ಆಡಿದ್ದಾರೆ.

ಬಿಜೆಪಿ ಸೇರ್ಪಡೆ

ಜೈಪುರ (ಪಿಟಿಐ): ನಿವೃತ್ತ ಐಎಎಸ್ ಅಧಿಕಾರಿ ಅಂತರ್ ಸಿಂಗ್ ನೆಹ್ರಾ, ಕಾಂಗ್ರೆಸ್ ಮುಖಂಡ ಸುರೇಶ್ ಮಿಶ್ರಾ ಸೇರಿದಂತೆ ಹತ್ತು ಮಂದಿ ಸೋಮವಾರ ಬಿಜೆಪಿ ಸೇರಿದ್ದಾರೆ.

ನೆಹ್ರಾ ಅವರು ಜೈಪುರ ಜಿಲ್ಲಾಧಿಕಾರಿ ಆಗಿದ್ದರು. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಮಿಶ್ರಾ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಸಂಗನೇರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿಯ ಘನಶ್ಯಾಮ್ ತಿವಾರಿ ವಿರುದ್ಧ ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.